ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಆರಗ ಸಮೀಪದ ಬೀಸು ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ರೈತ ರಂಜನ್ ಎಂಬುವರ 2000 ಅಡಿಕೆ ಗಿಡಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತೀರ್ಥಹಳ್ಳಿ ಅರಣ್ಯ ಇಲಾಖೆ ಎದುರು ರಾತ್ರಿ ಧರಣಿ ಕೈಗೊಂಡರು.
ಬೀಸು ಗ್ರಾಮದಿಂದ ಸುಪ್ರಿತಾ ರಂಜನ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದು, ಕೆಲವು ಪ್ರಭಾವಿಗಳು ನಾಮಪತ್ರ ವಾಪಾಸ್ ಪಡೆಯುವಂತೆ ಒತ್ತಡ ಹೇರಿದ್ದಾರೆನ್ನಲಾಗಿದೆ. ಇದಕ್ಕೆ ರಂಜಾನ್ ಮಣಿಯಲಿಲ್ಲ. ಇದೆ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು 2000 ಅಡಿಕೆ ಗಿಡ ಕಡಿದಿದ್ದಾರೆ ಎನ್ನಲಾಗಿದೆ.
ಈ ಘಟನೆ ಖಂಡಿಸಿ ಸ್ಥಳೀಯ ರೈತರ ಜೊತೆ ತೀರ್ಥಹಳ್ಳಿ ಅರಣ್ಯ ಇಲಾಖೆ ಎದುರು ರಾತ್ರಿ ಧರಣಿ ಕೈಗೊಂಡರು. ಬಿಜೆಪಿ ನಾಯಕರು ಎಲ್ಲಾ ಕಡೆ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು, ಶಾಸಕರ ಅಧಿಕಾರ ಬಳಸಿ ದೌರ್ಜನ್ಯ ಎಸಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.