ಹೈದರಾಬಾದ್: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಶ್ರೀಶೈಲಂ ಎಡದಂಡೆ ಕಾಲುವೆ (SLBC) ಸುರಂಗ ಕಾಮಗಾರಿ ವೇಳೆ ಅಪಾಯದಲ್ಲಿ ಸಿಲುಕಿರುವ ಎಂಟು ಜನರ ರಕ್ಷಣಾ ಕಾರ್ಯಾಚರಣೆ ಆರನೇ ದಿನವೂ ಮುಂದುವರಿದಿದೆ.
ಗುರುವಾರ ಬೆಳಿಗ್ಗೆ ಸೇನೆ, ನೌಕಾಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ಇಲಿ ರಂಧ್ರದ ಗಣಿಗಾರರು ಸುರಂಗದಿಂದ ಹೂಳು ಮತ್ತು ಅವಶೇಷಗಳನ್ನು ತೆರವು ಮಾಡುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಸುರಂಗ ಕೊರೆಯುವ ಯಂತ್ರದ (TBM) ಹಾನಿಗೊಳಗಾದ ಭಾಗಗಳನ್ನು ಬೇರ್ಪಡಿಸಲು ರಕ್ಷಣಾ ಕಾರ್ಯಕರ್ತರು ಗ್ಯಾಸ್ ಕಟ್ಟರ್‌ಗಳನ್ನು ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ತೆಲಂಗಾಣದ ನೀರಾವರಿ ಸಚಿವ N. ಉತ್ತಮ್ ಕುಮಾರ್ ರೆಡ್ಡಿ, ಸುರಂಗದೊಳಗೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸುವ ಕೆಲಸ ‘ಬಹಳ ಬೇಗ’ ಸಫಲವಾಗಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತದಲ್ಲಿದೆ. ತೀವ್ರಗೊಂಡ ರಕ್ಷಣಾ ಪ್ರಯತ್ನಗಳು, ಗಣ್ಯ ಪಡೆಗಳ ನಿಯೋಜನೆ ಮತ್ತು ಹೈಟೆಕ್ ವಿಧಾನದಿಂದ ಕಾರ್ಮಿಕರನ್ನು ತಲುಪುವಲ್ಲಿ ಶೀಘ್ರದಲ್ಲೇ ಪ್ರಗತಿ ಸಾಧಿಸಬಹುದು” ಎಂದು ಉತ್ತಮ್ ಕುಮಾರ್ ರೆಡ್ಡಿ ಹೇಳಿದ್ದಾರೆ. ರಕ್ಷಣಾ ಕಾರ್ಯಾಚರಣೆ ಎರಡು ದಿನಗಳಲ್ಲಿ ಪೂರ್ಣಗೊಳ್ಳಬಹುದು ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.