ಗುರುಗ್ರಾಮ್ (ಹರಿಯಾಣ): ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ತನ್ನ ನವೀನ ಉಪಕ್ರಮಗಳಿಗಾಗಿ ಮತ್ತೊಮ್ಮೆ ರಾಷ್ಟ್ರ ಮಟ್ಟದ ಮಾನ್ಯತೆ ಗಳಿಸಿದೆ. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ವತಿಯಿಂದ ನೀಡಲಾಗುವ Award of Excellence in Urban Transport–2025 ಪ್ರಶಸ್ತಿಯನ್ನು ಕೆಎಸ್‌ಆರ್‌ಟಿಸಿ ಪಡೆದುಕೊಂಡಿದೆ.
ಹಿಂದಿನ ವರ್ಷ ಅತ್ಯುತ್ತಮ ನಗರ ಸಾರಿಗೆ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ರಾಜ್ಯ ಸಂಸ್ಥೆಗಳ ಪೈಕಿ, ಮೈಸೂರಿನ ‘ಧ್ವನಿ ಸ್ಪಂದನ’ ಯೋಜನೆ ಈ ಗೌರವಕ್ಕೆ ಪಾತ್ರವಾಗಿದೆ.
ಮೈಸೂರಿನ ನಗರ ಸಾರಿಗೆಯ 200ಕ್ಕೂ ಹೆಚ್ಚು ಬಸ್ಸುಗಳಲ್ಲಿ ‘ಧ್ವನಿ ಸ್ಪಂದನ – ಆನ್‌ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್’ ಎಂಬ ದೇಶದ ಮೊದಲ ಯೋಜನೆಯನ್ನು ಕೆಎಸ್‌ಆರ್‌ಟಿಸಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ದೃಷ್ಟಿ ವಿಕಲ ಚೇತನ ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸುವ ಈ ಯೋಜನೆ, ಅವರ ಆತ್ಮವಿಶ್ವಾಸ ಮತ್ತು ಸಂಚಾರ ಸ್ವಾತಂತ್ರ್ಯದಲ್ಲಿ ಹೊಸ ಅಧ್ಯಾಯ ಬರೆದಿದೆ.
ಈ ಪ್ರಶಸ್ತಿಯನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಹಾಗೂ ರಾಜ್ಯ ಸಚಿವ ತೋಕನ್ ಸಾಹು ಅವರು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರಿಗೆ ಪ್ರದಾನ ಮಾಡಿದರು.
‘ಧ್ವನಿ ಸ್ಪಂದನ’ ಎಂದರೇನು?
ಐಐಟಿ ದೆಹಲಿಯ ‘ರೈಸ್ಡ್ ಲೈನ್ಸ್ ಫೌಂಡೇಶನ್’ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನ, ಜರ್ಮನಿಯ GEZ ಸಂಸ್ಥೆಯ ಸಹಯೋಗದೊಂದಿಗೆ ರೂಪುಗೊಂಡಿದೆ. ದೃಷ್ಟಿ ವಿಕಲ ಚೇತನರು ಧ್ವನಿಸೂಚನೆಗಳ ಮೂಲಕ ಬಸ್‌ಗಳನ್ನು ಗುರುತಿಸಲು ಮತ್ತು ಸುರಕ್ಷಿತವಾಗಿ ಪ್ರವೇಶದ ಸ್ಥಳವನ್ನು ಕಂಡುಹಿಡಿಯಲು ಇದು ನೆರವಾಗುತ್ತದೆ.
400ಕ್ಕೂ ಹೆಚ್ಚು ದೃಷ್ಟಿ ವಿಕಲ ಪ್ರಯಾಣಿಕರಿಗೆ ಇದರ ಬಳಕೆಯ ಕುರಿತ ತರಬೇತಿ ನೀಡಲಾಗಿದೆ. ಸರ್ಕಾರ, ಶಿಕ್ಷಣ ಸಂಸ್ಥೆಗಳು ಹಾಗೂ ಸ್ವಯಂಸೇವಾ ಸಂಘಟನೆಗಳ ಸಹಯೋಗದಲ್ಲಿ ಜಾರಿಗೆ ಬಂದಿರುವ ಈ ಉಪಕ್ರಮವು ದೇಶದ ಮಾದರಿ ಯೋಜನೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
