ಧಾರವಾಡ: ಸಚಿವ ಸಂತೋಷ್ ಲಾಡ್ ಒಂದಿಲ್ಲೊಂದು ವಿಚಾರಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಗಣಿ ಧಣಿಯಾಗಿ ಸಾವಿರಾರು ಮಂದಿಯ ಪಾಲಿಗೆ ಉದ್ಯೋಗದಾತನಾಗಿ ಗಮನಸೆಳೆದಿರುವ ಸಂತೋಷ್ ಲಾಡ್, ಜನಾನುರಾಗಿ ಶಾಸಕರಾಗಿ ಉತ್ತರ ಕರ್ನಾಟಕದಲ್ಲಿ ಕುತೂಹಲದ ಕೇಂದ್ರಬಿಂದುವಾಗಿದ್ದಾರೆ. ಇದೀಗ ಅವರು, ತಮ್ಮ ವಿಶೇಷ ನಡೆಯಿಂದಾಗಿ ಮತ್ತೊಮ್ಮೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಲಾಡ್ ಅವರು ‘ನೊಂದವರ ಪಾಲಿಗೆ ಆಶಾಕಿರಣ’ ಎಂಬುದು ಅವರ ಕ್ಷೇತ್ರದ ಜನರ ಅಂಬೋಣ. ಇದೀಗ ಭಿಕ್ಷೆ ಬೇಡುತ್ತಿದ್ದ ಮಹಿಳೆಯ ಬದುಕಿಗೆ ಮಾರ್ಗದರ್ಶಿಯಾದ ಪರಿ ಶಹಬ್ಬಾಸ್‌ಗಿರಿ ಗಿಟ್ಟಿಸುವಂತೆ ಮಾಡಿದೆ.
ಧಾರವಾಡ ಜಿಲ್ಲಾ ಪ್ರವಾಸ ಸಂದರ್ಭದಲ್ಲಿ ಸಚಿವ ಲಾಡ್ ಅವರಿಗೆ ಶನಿವಾರ ಅಚ್ಚರಿಯ ಸನ್ನಿವೇಶವೊಂದು ಎದುರಾಗಿತ್ತು. ಪುಟ್ಟ ಮಗುವನ್ನು ಹಿಡಿದುಕೊಂಡು ಮಹಿಳೆಯೊಬ್ಬರು ಹೊಟ್ಟೆಪಾಡಿಗಾಗಿ ಭಿಕ್ಷೆ ಬೇಡುತ್ತಿದ್ದ ಸ್ಥಿತಿಯನ್ನು ಕಂಡು ಅವರು ಮಮ್ಮಲ ಮರುಗಿದರು. ಮಹಿಳೆಯ ಬಳಿ ತೆರಳಿ ಕಷ್ಯಸುಖ ಆಲಿಸಿದರು. ಆಕೆಯ ಹಸಿವು ನೀಗಿಸಲು ಒಂದಷ್ಟು ಮೊತ್ತವನ್ನು ನೀಡಿದ ಲಾಡ್, ಆಕೆಗೆ ಸ್ವಾವಲಂಬಿ ಪಾಠ ಹೇಳಿದರು.
“ಮಗುವಿನೊಂದಿಗೆ ಹೀಗೆ ಬೀದಿಯಲ್ಲಿ ಭಿಕ್ಷೆ ಬೇಡುವುದಕ್ಕಿಂತ ಮನೆಗಳಿಗೆ ಹೋಗಿ ಕೆಲಸ ಮಾಡಬಹುದಲ್ವಾ.? ಯಾವ ಮನೆಗೆ ಹೋಗುತ್ತಿಯೋ ಅಲ್ಲೇ ಮಗುವನ್ನು ಬಿಟ್ಟು ನೀನು ಕೆಲಸ ಮಾಡಬಹುದು. ನಾನು ನಿನಗೆ ಸಹಾಯ ಮಾಡುತ್ತೇನೆ’ ಎಂದು ಸಚಿವ ಲಾಡ್ ಅಭಯ ನೀಡಿದರು.
ಪುಟ್ಟ ಮಗುವನ್ನು ಬಟ್ಟೆಯಲ್ಲಿ ಸೊಂಟಕ್ಕೆ ಕಟ್ಟಿಕೊಂಡು ಭಿಕ್ಷೆ ಬೇಡುತ್ತಿದ್ದ ಮಹಿಳೆಗೆ ಸಮೀಪದ ಹೊಟೇಲೊಂದರಲ್ಲಿ ಆಹಾರ ನೀಡಿದ ಅವರು ತಕ್ಷಣದ ಹಸಿವು ನೀಗಿಸಿದ್ದಾರೆ. ಜೊತೆಗೆ ಪುನರ್ವಸತಿಗೆ ಸಹಾಯ ಮಾಡಿದ್ದಾರೆ.
ಸಚಿವ ‘ಲಾಡ್’ ತಮ್ನ ಹೆಸರಿಗೆ ತಕ್ಕಂತೆಯೇ ಬೇರೊಬ್ಬರ ಬದುಕಲ್ಲಿ ‘ಸಂತೋಷ’ ಮೂಡಿಸಿದರು. ಅವರ ಸಹಾನುಭೂತಿಯ ನಡೆ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಈ ಮಹಿಳೆಗೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಡಿ 2,000 ರೂಪಾಯಿ ದೊರಕಿಸಿಕೊಡುವ ಭರವಸೆಯನ್ನೂ ನೀಡಿದರು.
ಇದೇ ವೇಳೆ, ಈ ಬಡ ಮಹಿಳೆಯ ಅಸಹಾಯಕತೆಯ ಬದುಕಿನ ಬಗ್ಗೆ ಬಗ್ಗೆ ಸಮಾಜ ಕಲ್ಯಾಣ ಇಲಾಖೆಗೆ ಹಲವು ಬಾರಿ ಮಾಹಿತಿ ನೀಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಸಂಶೋಧನಾ ವಿದ್ಯಾರ್ಥಿಯೊಬ್ಬರು ಸಚಿವರ ಗಮನಕ್ಕೆ ತಂದರು. ಅಧಿಕಾರಿಗಳ ನಿರ್ಲಕ್ಷ್ಯ ಬಗ್ಗೆ ಕುಪಿತರಾದ ಸಚಿವ ಲಾಡ್, ಇನ್ನು ಮುಂದೆ ನನಗೆ ಮಾಹಿತಿ ನೀಡಿ ಎಂದು ತಮ್ಮ ಮೊಬೈಲ್ ನಂಬರ್ ನೀಡಿದ ನಡೆ ಕೂಡಾ ಸಾರ್ವಜನಿಕರ ಮೆಚ್ಚುಗೆಗೆ ಸಾಕ್ಷಿಯಾಯಿತು.