ಮಂಡ್ಯ: ರಾಜ್ಯದ ಹಲವೆಡೆ ವಿವಾದದ ಬಿರುಗಾಳಿ ಎಬ್ಬಿಸಿರುವ ವಕ್ಫ್ ಜಮೀನು ವಿಚಾರ ಮಂಡ್ಯ ಜಿಲ್ಲೆಯಲ್ಲೂ ಆಕ್ರೋಶದ ಅಲೆ ಎಬ್ಬಿಸಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದ ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಜಮೀನಿನ ಪಹಣಿಯಲ್ಲೂ ವಕ್ಫ್ ಹೆಸರು ಕಾಣಿಸಿಕೊಂಡಿದೆ. ಸರ್ವೆ ನಂಬರ್ 74 ರಲ್ಲಿರುವ ದೇಗುಲ ಹಾಗೂ ದೇಗುಲಕ್ಕೆ ಸೇರಿ 6 ಗುಂಟೆ ಜಾಗ ವಕ್ಫ್ ಆಸ್ತಿ ಎಂದು ನಮೂದಾಗಿದೆ. ದೇವಸ್ಥಾನದ ಆಸ್ತಿ ವಕ್ಫ್ ಹೆಸರಿಗೆ ಸೇರ್ಪಡೆ ಆಗಿದ್ದಾದರೂ ಹೇಗೆ ಎಂಬ ನಿಗೂಢತೆ ಜನರನ್ನು ಕಾಡಿದೆ.
ಶ್ರೀ ಚಿಕ್ಕಮ್ಮ ಚಿಕ್ಕದೇವಿ ದೇವಸ್ಥಾನದ ಹೆಸರು ಕಳೆದ ಹಲವು ವರ್ಷಗಳಿಂದ ಪಹಣಿಯಲ್ಲಿ ನಮೂದಾಗುತ್ತಿತ್ತು. ಹಲವು ದಶಕಗಳ ಹಿಂದೆಯೇ ಈ ದೇಗುಲ ನಿರ್ಮಾಣವಾಗಿರುವುದು. ಆದರೆ, ಒಂದು ವರ್ಷದ ಹಿಂದೆ ದಿಢೀರಾಗಿ ‘ವಕ್ಫ್ ಆಸ್ತಿ’ ಎಂದು ನಮೂದಿಸಲಾಗಿದೆ.
ವಕ್ಫ್ ಒಡೆತನದಲ್ಲಿ ದೇಗುಲವಿದೆ ಎಂಬ ದಾಖಲೆ ನೋಡಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ನಮ್ಮೂರಲ್ಲಿ ಮುಸ್ಲಿಂ ಪ್ರಾಬಲ್ಯವೂ ಇಲ್ಲ. ದೇವಾಲಯದ ಹೆಸರಲ್ಲಿದ್ದ ಆಸ್ತಿಯನ್ನು ವಕ್ಫ್ಗೆ ಸೇರಿಸುವಂತೆ ಗ್ರಾಮಸ್ಥರು ಪತ್ರ ಬರೆದಿಲ್ಲ. ಆದಾಗಿಯೂ ಈ ಊರಲ್ಲಿ ವಕ್ಫ್ ಆಸ್ತಿ ಇರುವುದಾದರೂ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಆಕ್ರೋಶಗೊಂಡಿರುವ ಆಸ್ತಿಕರು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ, ಜಿಲ್ಲಾಡಳಿತದ ವಿರುದ್ಧ ಹೋರಾಟ ನಡೆಸುವುದಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.