ಜೂನ್ ಅಥವಾ ಜುಲೈನಲ್ಲಿ ತಾಲ್ಲೂಕು, ಜಿಲ್ಲಾ ಪಂಚಾಯತ್ ಚುನಾವಣೆ ಸಾಧ್ಯತೆ; ಹೈಕೋರ್ಟಿಗೆ ಸರ್ಕಾರದ ಮಾಹಿತಿ

ಬೆಂಗಳೂರು: ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮೇ ತಿಂಗಳ ಬಳಿಕ ನಡೆಯುವ ಸಾಧ್ಯತೆಗಳಿವೆ. ಈ ಸಂಬಂಧ ರಾಜ್ಯ ಸರ್ಕಾರ ಹೈಕೋರ್ಟಿಗೆ ಮಾಹಿತಿ ನೀಡಿದೆ.

3 ವರ್ಷಗಳಾದರೂ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ‌ ಅರ್ಜಿ ಸೋಮವಾರ ಹೈಕೋರ್ಟಿನಲ್ಲಿ ವಿಚಾರಣೆಗೆ ಬಂದಿದೆ. ಮೂರು ವರ್ಷಗಳಾದರೂ ಸಹ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ನಡೆಸದ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಅವರು ಹೈಕೋರ್ಟ್​ ಗಮನಸೆಳೆದರು. ಸರ್ಕಾರವು ಮೀಸಲಾತಿ ಪಟ್ಟಿ ನೀಡಿದರೆ ವೇಳಾಪಟ್ಟಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗದ ನಿಲುವನ್ನು ತಿಳಿಸಿದರು.

ಈ ವೇಳೆ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ಮೇ ತಿಂಗಳ ಬಳಿಕ ಎಲೆಕ್ಷನ್ ನಡೆಸುವುದಾಗಿ ಮಾಹಿತಿ ನೀಡಿದರು. ಈ ಕುರಿತು ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿತು.

ಈ ನಡುವೆ, ಮೇ ಅಂತ್ಯದೊಳಗೆ ಸರ್ಕಾರವು ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ನೀಡಿದರೆ, ಜೂನ್ ಅಥವಾ ಜುಲೈ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ.

Related posts