ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಇರುವಂತೆಯೇ ರಾಜಕೀಯ ವಲಯದಲ್ಲಿ ವಿದ್ಯಮಾನಗಳು ಗರಿಗೆದರಿವೆ. ಇದೇ ವೇಳೆ, ಪ್ರತಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದತ್ತ ಮುಖ ಮಾಡಿರುವುದು ಅಚ್ಚರಿ ಹಾಗೂ ಕುತೂಹಲಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ NDA ಜೊತೆ ಗುರುತಿಸಿಕೊಂಡ ಜೆಡಿಎಸ್ ಪಕ್ಷ ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಮೈತ್ರಿ ಘೋಷಿಸಿದೆ. ಈ ಮೈತ್ರಿ ಬೆಳವಣಿಗೆ ಬಗ್ಗೆ ಬಿಜೆಪಿಯ ಹಲವು ಮುಖಂಡರು ಅಸಮಾಧಾನಗೊಂಡಿದ್ದಾರೆ. ಈ ಬೆಳವಣಿಗೆಯ ನಡುವೆಯೇ ಬಿಜೆಪಿಯ ನಾಯಕರು ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಪಕ್ಷಾಂತರದ ಇಂಗಿತ ವ್ಯಕ್ತಪಡಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಅಕ್ಟೋಬರ್ 20ರಂದು ಕಾಂಗ್ರೆಸ್ ಸೇರುವ ತೀರ್ಮಾನ ಪ್ರಕಟಿಸಿರುವ ಬೆನ್ನಲೇ, ಮಾಜಿ ಶಾಸಕರಾದ ರಾಮಪ್ಪ ಲಮಾಣಿ ಹಾಗೂ ಎಂ.ಪಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಸೇರುವ ಮೂಲಕ ರಾಜ್ಯ ರಾಕೀಯದ ಬೆಳವಣಿಗೆ ಬಗ್ಗೆ ಅನೇಕಾನೇಕ ಲೆಕ್ಕಾಚಾರಗಳಿಗೆ ನಾಂದಿಹಾಡಿದ್ದಾರೆ.ಬಿಜೆಪಿ ಮುಖಂಡರಾದ ಮಾಜಿ ಶಾಸಕ ರಾಮಪ್ಪ ಲಮಾಣಿ ಅವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ, ಸಚಿವರಾದ ಎಚ್.ಕೆ. ಪಾಟೀಲ್, ಮಾಜಿ ಸಚಿವ ವಿನಯ್ ಕುಲಕರ್ಣಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಮ್ ಅಹ್ಮದ್, ಬಿ ಎನ್ ಚಂದ್ರಪ್ಪ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.