ಲಂಡನ್‌‌: ಭಾರತೀಯ ರಾಯಭಾರಿ ಕಚೇರಿಯಲ್ಲಿ ತ್ರಿವರ್ಣ ಧ್ವಜಕ್ಕೆ ಅಪಮಾನ; ಖಲಿಸ್ತಾನಿಗಳ ಕೃತ್ಯಕ್ಕೆ ಲಂಡನ್‌ನಲ್ಲಿರುವ ಕನ್ನಡಿಗರ ಖಂಡನೆ

ಲಂಡನ್ : ಲಂಡನ್‌‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯಲ್ಲಿ ತ್ರಿವರ್ಣ ಧ್ವಜ ಕೆಳಗಿಳಿಸಿರುವ ಖಲಿಸ್ತಾನಿಗಳ ಅಟ್ಟಹಾಸಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಖಲಿಸ್ಥಾನಿಗಳ ಈ ನಡೆಯು ಹಿಂದೂ ಸಿಖ್ಖರ ನಡುವೆ ದ್ವೇಷದ ಸನ್ನಿವೇಶ ಸೃಷ್ಟಿಸುವ ಕುತಂತ್ರವಾಗಿದೆ ಎಂದು ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.

ಲಂಡನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಕಟ್ಟಡದಲ್ಲಿದ್ದ ಭಾರತದ ತ್ರಿವರ್ಣ ಧ್ವಜವನ್ನು ಖಲಿಸ್ತಾನ್ ಪ್ರತ್ಯೇಕತಾವಾದಿಗಳು ಕೆಳಗಿಳಿಸಿ ಅವಮಾನಿಸಿದ್ದಾರೆ. ಆ ಜಾಗದಲ್ಲಿ ಖಲಿಸ್ತಾನ್ ಧ್ವಜ ಹಾರಿಸಿ ಅಟ್ಟಹಾಸ ಮೆರೆದಿದ್ದಾರೆ.

ಲಂಡನ್‌ನಲ್ಲಿನ ಈ ಘಟನೆ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಲಂಡನ್‌ನಲ್ಲಿರುವ ರಾಯಭಾರಿ ಕಚೇರಿಯಲ್ಲಿನ ಭದ್ರತಾ ಲೋಪದ ಬಗ್ಗೆ ಭಾರತ ವಿವರಣೆ ಕೇಳಿದೆ.

ಇದೇ ವೇಳೆ, ಲಂಡನ್‌ನಲ್ಲಿರುವ ಭಾರತೀಯರೂ ಕೂಡಾ ಈ ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಖಲಿಸ್ತಾನಿಗಳ ಕೃತ್ಯವನ್ನು ಖಂಡಿಸಿರುವ ಕನ್ನಡಿಗರೂ ಆದ ಲಂಡನ್ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್, ಇದು ಹಿಂದೂ ಮತ್ತು ಸಿಖ್ಖರ ನಡುವೆ ವೈಷಮ್ಯ ಸೃಷ್ಟಿಸುವ ಕುತಂತ್ರವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯಲ್ಲಿ ನಡೆದಿರುವುದು ಸಮಾಜಘಾತುಕ ಕೃತ್ಯವಾಗಿದೆ. ಎಂದು ಘಟನೆಯನ್ನು ಖಂಡಿಸಿರುವ ಡಾ.ನೀರಜ್ ಪಾಟೀಲ್, ಹಿಂದೂಗಳು ಮತ್ತು ಸಿಖ್ ಸಮುದಾಯದವರು ಶಾಂತಿ ಸಹಬಾಳ್ವೆಯಿಂದಿದ್ದು ಈ ಒಳ್ಳೆಯ ಸಂಬಂಧವನ್ನು ಕೆಡಿಸುವ ವಿಚ್ಚಿದ್ರಕಾರಿ ಶಕ್ತಿಗಳ ಪ್ರಯತ್ನ ಫಲಿಸದು ಎಂದು ಪ್ರತಿಕ್ರಿಯಿಸಿದ್ದಾರೆ.

Related posts