ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಕೂಡ ದೂರದೃಷ್ಟಿ, ದೇಶದ ಹಿತದೃಷ್ಟಿಯುಳ್ಳ ಬಜೆಟ್ ಮಂಡಿಸಿದ್ದಾರೆ. ಬಜೆಟ್‍ನಲ್ಲಿ 7 ವಿಶೇಷಗಳಿಗೆ ಆದ್ಯತೆ ನೀಡಲಾಗಿದೆ. ಇದರಲ್ಲಿ ಕಟ್ಟಕಡೆಯ ಮನುಷ್ಯನಿಗೆ ತಲುಪುವ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಹಾಗೆಯೇ ಬಡವರಿಗೆ ಬಲ ನೀಡುವ ಬಜೆಟ್ ಇದಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ.5,300 ಕೋಟಿ ಅನುದಾನ ನೀಡಿದ್ದು, ಮನೆಮನೆಗೆ ನಳ್ಳಿ ನೀರು (ಹರ್ ಘರ್ ಜಲ್) ಯೋಜನೆಯ ವೇಗವರ್ಧನೆಗೆ ಕಾರಣ ಆಗಲಿದೆ ಎಂದು ತಿಳಿಸಿದ್ದಾರೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಕೃತಜ್ಞತೆಗಳು ತಿಳಿಸಿದ್ದಾರೆ.
ಇಂದಿನ ಕೇಂದ್ರ ಬಜೆಟ್ ಯುವ ಸಮುದಾಯ, ಮೂಲಸೌಕರ್ಯ, ಪರಿಸರ ಸ್ನೇಹಿ ಬಜೆಟ್ ಆಗಿದೆ. ಆದಾಯ ತೆರಿಗೆ ರಿಯಾಯಿತಿ, ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ನೀಡಲಾಗಿದೆ. ಬಡವರಿಗೆ ಬಲ ನೀಡುವ ಬಜೆಟ್ ಇದಾಗಿದ್ದು, ಪ್ರಧಾನ ಮಂತ್ರಿಗಳಿಗೆ, ಕೇಂದ್ರ ಹಣಕಾಸು ಖಾತೆ ಸಚಿವೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಿ.ಟಿ ರವಿ ಅವರು ಹೇಳಿದ್ದಾರೆ.
ಒಬ್ಬ ಸ್ಟೇಟ್ಸ್ ಮ್ಯಾನ್ ಅಧಿಕಾರ ನಡೆಸುತ್ತಿರುವುದಕ್ಕೆ ಜಗತ್ತಿನಲ್ಲಿ ನಾವು ಗೌರವ ಸಂಪಾದಿಸುವ ಸ್ಥಿತಿಗೆ ಬಂದಿದ್ದೇವೆ. ಹಾಗೆ ಆಗದೇ ಇದ್ದಿದ್ದರೆ ನಾವು ಕೂಡ ಪಾಕಿಸ್ಥಾನದ ರೀತಿಯಲ್ಲಿ ಭಿಕ್ಷೆ ಎತ್ತುವ ಸ್ಥಿತಿಗೆ ಬರುತ್ತಿದ್ದೆವು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರದ ಕಳೆದ ಒಂಬತ್ತು ಬಜೆಟ್‍ಗಳನ್ನು ಗಮನಿಸಿದರೆ ದೂರದೃಷ್ಟಿ, ಆತ್ಮನಿರ್ಭರ ಭಾರತ್ ಕಡೆ ಹೆಜ್ಜೆ ಹಾಕುವ ಬಜೆಟ್ ಇದು, ಪ್ರಧಾನಿ ಮೋದಿಜಿ, ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅಭಿನಂದಿಸುತ್ತೇನೆ ಎಂದು ಸಿ.ಟಿ ರವಿ ಹೇಳಿದ್ದಾರೆ.