ಬೆಂಗಳೂರು: ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣದ ತನಿಖೆ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಅಪಹರಣ ಮಾಡಿದವರು ಯಾರು ಎಂಬ ಬಗ್ಗೆ ವರ್ತೂರು ಪ್ರಕಾಶ್ ಸ್ಪಷ್ಟ ಮಾಹಿತಿ ನೀಡದಿರುವುದು ಪೊಲೀಸ್ ತನಿಖೆಯ ವೇಗಕ್ಕೆ ಆದಿಯಾಗಿದೆ ಎನ್ನಲಾಗಿದೆ.
ವರ್ತೂರು ಪ್ರಕಾಶ್ ಅವರನ್ನು ಕಿಡಿಗೇಡಿಗಳು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿದ್ದರು ಎನ್ನಲಾಗಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ಆರಂಭಿಸಿದ್ದಾರೆ. ವರ್ತೂರು ಪ್ರಕಾಶ್ ಹೇಳಿಕೆಯನ್ನಾಧರಿಸಿ ತನಿಖೆಗೆ ಮುನ್ನುಡಿ ಬರೆದಿರುವ ಬೆಳ್ಳಂದೂರು ಠಾಣೆಯ ಪೊಲೀಸರು, ವರ್ತೂರು ಪ್ರಕಾಶ್ ಕಿಡ್ನಾಪ್ ಆದ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ.
ತನ್ನದೇ ಕಾರಿನಲ್ಲಿ ಕಿಡಿಗೇಡಿಗಳು ಕಿಡ್ನಾಪ್ ಮಾಡಿದ್ದರು. ಹಲ್ಲೆ ನಡೆಸಿ 30 ಕೋಟಿ ರೂ. ಹಣಕ್ಕೆ ಬೇಡಿಕೆಯಿಟ್ಟಿದ್ದರು. ಹಣ ಕೊಡದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದರು ಎಂದು ವರ್ತೂರು ಪ್ರಕಾಶ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಹಾಗಾಗಿ ವರ್ತೂರು ಪ್ರಕಾಶ್ ಅವರನ್ನು ಅಪಹರಿಸಿ ಕರೆದೊಯ್ಯಲಾಗಿದೆ ಎನ್ನಲಾದ ಪ್ರದೇಶಗಳಲ್ಲಿ ಹಾಗೂ ಕಾರು ಪತ್ತೆಯಾದ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಸ್ಥಳದಲ್ಲೂ ಸಿಗಬಹುದಾದ ಸಿಸಿಟಿವಿ ಹಾಗೂ ಸುಳಿವುಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.