ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ; ಇದು ‘ವಿಜಯದ ಹಾದಿ’ ಎಂದ ಸಂತೋಷ್

ಬೆಂಗಳೂರು: ರಾಜ್ಯ ಬಿಜೆಪಿಗೆ ನೂತನ ಸಾರಥಿಯಾಗಿ ಮಾಜಿ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ನೇಮಕವಾಗಿದ್ದು ಕಮಲ ಪಾಳಯದಲ್ಲಿ ರಣೋತ್ಸಾಹ ಹೆಚ್ಚಿದೆ.

ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರು ಈ ವರೆಗೂ ರಾಜ್ಯ ಬಿಜೆಪಿಯ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುತ್ತಿದ್ದರು. ತಮ್ಮದೇ ಆದ ಅಭಿಮಾನಿಗಳ ಹಾಗೂ ಬೆಂಬಲಿಗರ ಸಮೂಹವನ್ನು ಹೊಂದಿರುವ ಬಿ.ವೈ.ವಿಜಯೇಂದ್ರ ಅವರು ಇದೀಗ ರಾಜ್ಯ ಬಿಜೆಪಿಯ ದಂಡನಾಯಕನಾಗುತ್ತಿದ್ದಾರೆ. ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ನಡೆದಿರುವ ಈ ಬೆಳವಣಿಗೆ ಕಮಲ ಪಾಳಯದಲ್ಲಿ ಕಾರ್ಯಕರ್ತರ ಉತ್ಸಾಹವನ್ನು ಹೆಚ್ಚಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವ ವಿಜಯೇಂದ್ರ ಅವರಿಗೆ ಅಭಿನಂದನೆಗಳ ಮಹಾಮಳೆಯಾಗುತ್ತಿದೆ. ವಿಜಯೇಂದ್ರ ಅವರ ನೇಮಕವು ಬಿಜೆಪಿ ಪಾಲಿಗೆ ‘ವಿಜಯದ ಹಾದಿ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಬಣ್ಣಿಸಿದ್ದಾರೆ. ಟ್ವಿಟರ್‌ನಲ್ಲಿ ಅಭಿನಂದನೆಯ ಪೋಸ್ಟ್ ಹಾಕಿರುವ ಅವರು, ‘ಪಕ್ಷವನ್ನು ವಿಜಯದ ಹಾದಿಯಲ್ಲಿ ನಡೆಸುವಲ್ಲಿ ಯಶಸ್ಸು ನಿಮ್ಮದಾಗಲಿ’ ಎಂದು ಶುಭ ಹಾರೈಸಿದ್ದಾರೆ.

ಇದೇ ವೇಳೆ, ವಿಜಯೇಂದ್ರ ನೇತೃತ್ವದಲ್ಲಿ ಪಕ್ಷವು ರಾಜ್ಯಾದ್ಯಂತ ಹೆಚ್ಚು ಸಂಘಟಿತವಾಗಲಿದೆ ಎಂಬ ಆಶಾವಾದವನ್ನು ಮಾಜಿ ಸಚಿವ ಸಿ.ಟಿ.ರವಿ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಯ ಪೋಸ್ಟ್ ಹಾಕಿರುವ ಸಿ.ಟಿ.ರವಿ, ಪಕ್ಷದ ನೂತನ ಅಧ್ಯಕ್ಷರಾಗಿ ನೇಮಕವಾಗಿರುವ ವಿಜಯೇಂದ್ರರಿಗೆ ಸಕಲ ಯಶಸ್ಸು ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

ಇದೇ ವೇಳೆ, ‘ಸಂಘಟನಾ ಚಾತುರನ ನೇತೃತ್ವದಲ್ಲಿ ಬಿಜೆಪಿ ಪಕ್ಷವು ಇನ್ನಷ್ಟು ಬಲಗೊಳ್ಳುವ ಮೂಲಕ ರಾಜ್ಯದ ಜನತೆಯ ಆಶೋತ್ತರಗಳಿಗೆ ಧ್ವನಿಯಾಗಲಿರುವುದು ನಿಸ್ಸಂಶಯ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

Related posts