ಕಾಂಗ್ರೆಸ್ಸಿನ ‘ಭಾಗಿಧಾರಿ ಸಮಾವೇಶ’ ಬಗ್ಗೆ ವಿಜಯೇಂದ್ರ ಟೀಕೆ

ಬೆಂಗಳೂರು: ಆರೆಸ್ಸೆಸ್-ಬಿಜೆಪಿಯನ್ನು ವಿಷಕಾರಕ ಎಂದಿದ್ದ ಮಲ್ಲಿಕಾರ್ಜುನ ಖರ್ಗೆಯವರು ದೆಹಲಿಯಲ್ಲಿ ಶುಕ್ರವಾರ ನಡೆದ ‘ಭಾಗಿಧಾರಿ ಸಮಾವೇಶ’ದಲ್ಲಿ ನಿಂತು ಹಿಂದುಳಿದ ಸಮುದಾಯಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

1956 ರಲ್ಲಿ OBC ಸಮುದಾಯಗಳಿಗೆ ಮೀಸಲಾತಿ ನೀಡಲು ಶಿಫಾರಸು ಮಾಡಿದ್ದ ಕಾಕಾ ಕಾಲೇಲ್ಕರ್ ವರದಿಯನ್ನು ಹೊಸಕಿ ಹಾಕಿ ಹಿಂದುಳಿದವರ ಭವಿಷ್ಯಕ್ಕೆ ವಿಷ ಹಾಕಿದ್ದು ನಿಮ್ಮ ಪಂಡಿತ್ ಜವಾಹರ್ ಲಾಲ್ ನೆಹರು ಅವರು ಎಂಬುದನ್ನು ನೀವು ಮರೆತುಬಿಟ್ಟಿರಾ? ಎಂದು ವಿಜಯೇಂದ್ರ ಅವರು ಎಐಸಿಸಿ ಅಧ್ಯಕ್ಷರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 39 ವರ್ಷಗಳ ಅಧಿಕಾರಾವಧಿಯಲ್ಲಿ ದೇಶದಲ್ಲಿ ಹಿಂದುಳಿದವರಿಗೆ ಮೀಸಲಾತಿ ಏಕೆ ನೀಡಲಿಲ್ಲ? ಕರ್ನಾಟಕದಲ್ಲಿ ಹಿಂದುಳಿದವರ ಬದುಕಿಗೆ ಬೆಳಕಾಗಲು ಮೀಸಲಾತಿ ಜಾರಿಗೊಳಿಸಿದ ಡಿ. ದೇವರಾಜ ಅರಸರ ರಾಜಕೀಯ ಬದುಕಿಗೆ ನಿಮ್ಮ ಸಮ್ಮುಖದಲ್ಲೇ ವಿಷ ಹಾಕಿದ್ದು ನಿಮ್ಮ ಕಾಂಗ್ರೆಸ್ ನ ಅಂದಿನ ಅಧಿನಾಯಕಿ ಇಂದಿರಾ ಗಾಂಧಿ ಯವರು ಎಂಬುದನ್ನು ಇಷ್ಟು ಬೇಗ ಮರೆತುಬಿಟ್ಟಿರಾ? ಅಷ್ಟೇ ಏಕೆ, ಇತ್ತೀಚೆಗೆ ಕರ್ನಾಟಕದ ಜನರ ತೆರಿಗೆ ಹಣ ರೂ.165 ಕೋಟಿಗಳನ್ನು ‘ನೀರಲ್ಲಿ ಹೋಮ ಮಾಡಿ’ ಕಾಂತರಾಜು ಆಯೋಗದ ವರದಿಯನ್ನು ಕಸದ ಬುಟ್ಟಿಗೆ ಎಸೆಯಲು ಆದೇಶಿಸಿದ್ದು ನಿಮ್ಮ ರಾಹುಲ್ ಗಾಂಧಿಯವರು ಎನ್ನುವುದನ್ನೂ ಮರೆತಿರೇಕೆ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಧ್ಯೇಯ ಹಾಗೂ ಕಾರ್ಯಕ್ರಮದಲ್ಲಿ ಜಾತಿಗಳ ನಡುವೆ ಅಂತರಕ್ಕೆ ಅವಕಾಶವಿಲ್ಲ, ಜಾತಿ ರಹಿತ ಸಮಾನ ಸಮಾಜದ ಪರಿಕಲ್ಪನೆ ಹಾಗೂ ನಡವಳಿಕೆ ಸಂಘದ ಆದ್ಯತೆ. “ಇವನಾರವ ಇವನಾರವ…. ಎನಿಸದಿರಯ್ಯ ಇವ ನಮ್ಮವ ಇವ ನಮ್ಮವ….ʼʼ ಎನ್ನುವ ಬಸವತತ್ವವನ್ನು ಆಧರಿಸಿ ಭಾರತೀಯ ಸಮಾಜ ಕಟ್ಟುವುದಕ್ಕಾಗಿ ಹಾಗೂ ಭಾರತದ ಸಾರ್ವಭೌಮತ್ವವವನ್ನು ಎತ್ತಿ ಹಿಡಿಯುವುದಕ್ಕಾಗಿ ಸಮರ್ಪಿತವಾಗಿರುವ ಸಂಘಟನೆ, ಇದೇ ಆದರ್ಶದ ನೆರಳಿನಲ್ಲಿ ಭಾರತೀಯ ಜನತಾ ಪಾರ್ಟಿ ವಿಶ್ವವೇ ನಿಬ್ಬೆರಗಾಗುವಂತೆ ಬೃಹತ್ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಆಶಯವನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಸಮರ್ಥ ನಾಯಕತ್ವದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಜೀ ಅವರನ್ನು ಈ ದೇಶಕ್ಕೆ ಕೊಡಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಹೆಮ್ಮೆಯ ಸುಪುತ್ರ, ಹಿಂದುಳಿದ ಸಮುದಾಯಗಳ ಕಣ್ಮಣಿ. ಸ್ವಾತಂತ್ರ್ಯಾನಂತರ ಪ್ರಪ್ರಥಮವಾಗಿ ರಾಷ್ಟ್ರೀಯ ಹಿಂದುಳಿದ ಶಾಶ್ವತ ಆಯೋಗವನ್ನು ರಚಿಸಿ, ಅದಕ್ಕೆ ಸಾಂವಿಧಾನಿಕ ಮಾನ್ಯತೆಯನ್ನು ತಂದು ಕೊಡುವ ಮೂಲಕ ಸಾಮಾಜಿಕ ನ್ಯಾಯ ವಿತರಣೆಗಾಗಿ ದಿಟ್ಟ ಹೆಜ್ಜೆ ಇಟ್ಟದ್ದು ಮೋದಿಯವರು ಎಂದು ವಿಜಯೇಂದ್ರ ಬಣ್ಣಿಸಿದ್ದಾರೆ.

ಶತಮಾನದ ಅಂತರದಲ್ಲಿ ಸ್ವಾತಂತ್ರ್ಯಾನಂತರದಲ್ಲಿ ಜನಗಣತಿಯೊಂದಿಗೆ ಜಾತಿಗಣತಿಯನ್ನೂ ಸೇರ್ಪಡೆ ಮಾಡುವ ಮೂಲಕ ಹಿಂದುಳಿದ ಸಮುದಾಯಗಳ ಕಲ್ಯಾಣಕ್ಕಾಗಿ ‘ಸಾಮಾಜಿಕ ನ್ಯಾಯದ ತಕ್ಕಡಿ’ಯನ್ನು ದಿಟ್ಟತನದಿಂದ ಹಿಡಿದು ನಿಂತಿರುವವರು ಪ್ರಧಾನಿ ನರೇಂದ್ರ ಮೋದಿಯವರು ಎನ್ನುವುದನ್ನು ಈ ದೇಶದ ಕೋಟಿ, ಕೋಟಿ ಹಿಂದುಳಿದ ಸಮುದಾಯಗಳ ಜನರು ಮನವರಿಕೆ ಮಾಡಿಕೊಂಡಿದ್ದಾರೆ ಎಂದ ವಿಜಯೇಂದ್ರ, ಕಾಂಗ್ರೆಸ್ಸಿಗರು ಎಷ್ಟೇ ಸಮಾವೇಶ ನಡೆಸಿದರೂ, ದಿಕ್ಕು ತಪ್ಪಿಸುವ ಕುತಂತ್ರದ ಮಾತುಗಳನ್ನು ಆರ್ಭಟಿಸಿ ನುಡಿದರೂ ಅದಕ್ಕೆ ಮರುಳಾಗುವಷ್ಟು ಜನ ಮೂರ್ಖರಲ್ಲ ಎಂಬ ವಿವೇಕ ನಿಮಗಿದೆ ಎಂದು ನಂಬಿದ್ದೇನೆ ಎಂದು ಕುಟುಕಿದ್ದರೆ.

Related posts