RSSಗೆ ನಿಷೇಧ? ಪ್ರಿಯಾಂಕ್ ಪ್ರತಿಪಾದನೆಗೆ ವಿಜಯೇಂದ್ರ ಪ್ರಹಾರ

ಬೆಂಗಳೂರು: ‘ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ?’ ಎಂದು ಆರೆಸ್ಸೆಸ್ ಬ್ಯಾನ್ ಬಗ್ಗೆ ಹೇಳಿಕೆ ನೀಡಿದ್ದಾರೆ ಎನ್ನಲಾದ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟಾಂಗ್ ನೀಡಿದ್ದಾರೆ.

ಶತಮಾನ ಪೂರೈಸಿರುವ ಲಕ್ಷಾಂತರ ಸ್ವಯಂಸೇವಕರನ್ನು ಹೊಂದಿರುವ ರಾಷ್ಟ್ರದ ಹಾಗೂ ವಿಶ್ವದ ಏಕೈಕ ಮಹಾನ್ ದೇಶಭಕ್ತರ ಸಂಘಟನೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂಬ ಪ್ರಖರ ಸತ್ಯವನ್ನು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಹತಾಶೆಯ ಮನಸ್ಸಿನ ಬಾಗಿಲ ಕಿಂಡಿಯಿಂದ ಇಣುಕಿ ನೋಡಲಿ ಎಂದು ವಿಜಯೇಂದ್ರ ಪ್ರತಿಕ್ರಿಯಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಹಾನ್ ವೃಕ್ಷ, ಈ ವೃಕ್ಷವನ್ನು ಬೇರು ಸಮೇತ ಕಿತ್ತೊಗೆಯುತ್ತೇವೆಂದು ಶತಮಾನಗಳಿಂದಲೂ ವಿಕೃತ ಮನಸ್ಸಿನ ರಾಜಕೀಯ ಶಕ್ತಿಗಳು ವ್ಯರ್ಥ ಪ್ರಲಾಪ ಮಾಡುತ್ತಲೇ ಇವೆ. RSSನ ರಂಬೆ-ಕೊಂಬೆಗಳನ್ನೂ ಕೊಂಕಿಸಲಾಗದವರ ಸೊಲ್ಲಡಗಿ ದಿಕ್ಕು ಕಾಣದಂತೆ ಧೂಳಿಪಟವಾಗಿವೆ ಎಂದು ವಿಜಯೇಂದ್ರ ಅವರು ಪ್ರಿಯಾಂಕ್ ಖರ್ಗೆಗೆ ನೆನಪಿಸಿದರು.

ಈ ಸಾಲಿಗೆ ಕಾಂಗ್ರೆಸ್ ಸೇರ್ಪಡೆಯಾಗಿರುವುದರಿಂದಲೇ ರಾಷ್ಟ್ರದ ರಾಜಕೀಯ ಭೂಪಟದಲ್ಲಿ ದುರ್ಬೀನು ಹಾಕಿ ಹುಡುಕುವ ದಯನೀಯ ಪರಿಸ್ಥಿತಿಯಲ್ಲಿ ಅಸ್ತಿತ್ವಕ್ಕಾಗಿ ತಿಣುಕಾಡುತ್ತಿದೆ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮಾತಿರಲಿ, ಭವಿಷ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಉಳಿಯುತ್ತದೆಯೇ ಎಂಬ ಬಗ್ಗೆ ಪ್ರಿಯಾಂಕ್ ಖರ್ಗೆ ತಲೆಕೆಡಿಸಿಕೊಳ್ಳಲಿ ಎಂದಿದ್ದಾರೆ.

“ದಂಡಿಗೆದರಲಿಲ್ಲ ದಾಳಿಗೆದರಲಿಲ್ಲ ಖಾಲಿ ಡಬ್ಬದ ಸದ್ದಿಗೆ ಹೆದರಲಾದೀತೇ?” ಎಂಬ ಮಾತನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೆನಪಿಸಬಯಸುವೆ ಎಂದು ವಿಜಯೇಂದ್ರ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ.

Related posts