ಬೆಂಗಳೂರು: ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರಿರುವ ಮಾಜಿ ಸಚಿವ ಎಚ್.ವಿಶ್ವನಾಥ್ ಇದೀಗ ತಮ್ಮನ್ನು ಆಪರೇಷನ್ ಕಮಲಕ್ಕೆ ಖೆಡ್ಡಾ ತೋಡಿದವರ ವಿರುದ್ಧವೇ ಆಕ್ರೋಶ ಹೊರಹಾಕಿದ್ದಾರೆ. ಹುಣಸೂರು ಉಪ ಚುನಾವಣೆಯಲ್ಲಿ ತಮ್ಮ ಸೋಲಿಗೆ ಸಿ.ಪಿ.ಯೋಗೀಶ್ವರ್ ಹಾಗೂ ಎನ್.ಆರ್.ಸಂತೋಷ್ ಕಾರಣವೆಂದು ಎಚ್.ವಿಶ್ವನಾಥ್ ಸ್ಫೋಟಕ ಹೇಳಿಕೆ ನೀಡಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್.ವಿಶ್ವನಾಥ್, ಹುಣಸೂರು ಉಪ ಚುನಾವಣೆಯಲ್ಲಿ ಖರ್ಚಿಗಾಗಿ ಪಕ್ಷ ನೀಡಿದ್ದ ಹಣವನ್ನು ಈ ನಾಯಕರು ಲಪಟಾಯಿಸಿದ್ದಾರೆ ಎಂದು ದೂರಿದರು.
ಕಟೀಲ್ ಬಗ್ಗೆಯೂ ಬೇಸರ
ಮುಖ್ಯಮಂತ್ರಿ ಹಾಗೂ ಪಕ್ಷದಿಂದ ಚುನಾವಣಾ ಖರ್ಚಿಗಾಗಿ ನೀಡಿದ ದೊಡ್ಡಮಟ್ಟದ ಹಣವನ್ನು ಸಿ.ಪಿ. ಯೋಗೀಶ್ವರ್ ಹಾಗೂ ಎನ್.ಆರ್ ಸಂತೋಷ್ ಲಪಟಾಯಿಸಿದರ ಎಂದ ಅವರು, ಉಪ ಚುನಾವಣೆ ಅಭ್ಯರ್ಥಿ ಘೋಷಣೆಗೂ ಮುನ್ನವೇ ತಾನೆ ಅಭ್ಯರ್ಥಿ ಎಂದು ಎಲ್ಲೆಡೆ ಫ್ಲೆಕ್, ಬ್ಯಾನರ್ ಹಾಕಿಹೊಂಡು ಪ್ರಚಾರ ಮಾಡಿದರು. ಸೀರೆ, ಕುಕ್ಕರ್ ನೀಡಿದರು. ಅದರೂ ಸಹ ಬಹಿರಂಗವಾಗಿಯೇ ನಡೆಸಿ ಸಿಕ್ಕಿಬಿದ್ದರು. ಈ ನಾಯಕರ ವಿರುದ್ಧ ಸಿಎಂ ಹಾಗೂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್’ಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇದರಿಂದ ತಮಗೆ ತುಂಬಾ ಬೇಸರವಾಗಿದೆ ಎಂದು ಎಚ್.ವಿಶ್ವನಾಥ್ ಅಸಮಾಧಾನ ಹೊರಹಾಕಿದ ವೈಖರಿ ಕೇಸರಿ ಮುಖಂಡರಿಗೆ ಮುಜುಗರಕ್ಕೀಡುಮಾಡಿದೆ.