ಬೆಂಗಳೂರು: ಚುನಾವಣಾ ಹೊಸ್ತಿಲಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಭರಪೂರ ಯೋಜನೆಗಳು ಹರಿದುಬಂದಿದೆ. ವಿವಿಧ ಯೋಜನೆ ಜಾರಿಗೊಳಿಸುವ ಕ್ಷೇತ್ರದ ಶಾಸಕರೂ ಆದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಕನಸುಗಳಿಗೆ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ನೀರೆರೆದಿದ್ದಾರೆ. ಅವರು ಶುಕ್ರವಾರ ವಿವಿಧ ಯೋಜನೆಗಳಿಗೆ ಮುನ್ನುಡಿ ಬರೆದ ಬೆಳವಣಿಗೆ ಗಮನಸೆಳೆಯಿತು.
ಕೆಂಗೇರಿ ಉಪನಗರ ಕೊಮ್ಮಘಟ್ಟದಲ್ಲಿ ಸಹಕಾರ ಇಲಾಖೆ ಹಾಗೂ ಇತರೆ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯ ಜೊತೆಯಲ್ಲೇ ವಿವಿಧ ಯೋಜನೆಗಳ ಫಲಾನುಭವಿಗಳ ಸಮಾವೇಶವು ಶಕ್ತಿಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಸಮಾವೇಶದಲ್ಲಿ ಅಮಿತ್ ಶಾ, ಯಡಿಯೂರಪ್ಪ ಸಹಿತ ಬಿಜೆಪಿಯ ಹಿರಿಯ ನಾಯಕರ ಸಮ್ನುಖದಲ್ಲೇ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಸಚಿವ ಎಸ್.ಟಿ.ಸೋಮಶೇಖರ್, ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಉದ್ಘಾಟನೆ ಮಾಡಿದ್ದಾರೆ ಎಂದರು.
ಪ್ರಮುಖ ಯೋಜನೆಗಳು:
ಬಿಡಿಎ ಬಡಾವಣೆಗೆ ಒಳಪಟ್ಟ 14 ಹಳ್ಳಿಗಳಿಗೆ ಕುಡಿಯುವ ನೀರು ಒಳಚರಂಡಿ ಪೈಪ್ ಲೈನ್, ಮಂಚನಬೆಲೆ ಜಲಾಶಯದಿಂದ ಕುಂಬಳಗೋಡು ಹಾಗೂ ಸುತ್ತಮುತ್ತಲಿನ 72 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ಯೋಜನೆಗೆ ಚಾಲನೆ ನೀಡಲಾಗಿದೆ.
ಕ್ಷೇತ್ರದಲ್ಲಿ ಮಳೆ ಅನಾಹುತ ತಪ್ಪಿಸಲು 253 ಕೋಟಿ ರೂ. ಅನುದಾನವನ್ನು ಮುಖ್ಯಮಂತ್ರಿಗಳು ಒದಗಿಸಿದ್ದಾರೆ.
ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು 350 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ.
94 ಸಿಸಿ ಅಡಿ ಹಕ್ಕು ಪತ್ರ ವಿತರಣೆ ಜೊತೆಗೆ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗುತ್ತಿದೆ.
ತಮ್ಮ ಇಲಾಖೆಯ ಕಾರ್ಯ ಸಾಧನೆಗಳ ಬಗ್ಗೆ ತಮ್ಮ ಭಾಷಣದಲ್ಲಿ ಮಾಹಿತಿ ಹಂಚಿಕೊಂಡ ಸಚಿವ ಎಸ್.ಟಿ.ಸೋಮಶೇಖರ್, ರಾಜ್ಯದಲ್ಲಿರುವ 6 ಸಾವಿರಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಒಂದೇ ತಂತ್ರಾಂಶ ಅಳವಡಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ 325 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ, ಉಳಿದ ಹಣವನ್ನು ರಾಜ್ಯ ಸರ್ಕಾರ ಮತ್ತು ಡಿಸಿಸಿ ಬ್ಯಾಂಕ್‌ಗಳು ಭರಿಸಲಿವೆ ಎಂದರು.
ಕೃಷಿ ಪತ್ತಿನ ಸಹಕಾರ ಸಂಘಗಳು ಸಾಲ ನೀಡಿ, ಸಾಲ ವಸೂಲಿ ಮಾಡುವುದಷ್ಟೇ ಅಲ್ಲ, ಅವುಗಳನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡುವ ದೃಷ್ಟಿಯಿಂದ ಮಾಡೆಲ್ ಬೈಲಾ ತರಲಾಗುತ್ತಿದೆ. ಇದರಿಂದ ಪೆಟ್ರೋಲ್ ಬಂಕ್, ಕಲ್ಯಾಣ ಮಂಟಪ ಆರಂಭಿಸುವುದರ ಜೊತೆಗೆ ರೈತರಿಗೆ ಸಕಲ ರೀತಿಯಲ್ಲಿ ಸೌಕರ್ಯ ದೊರಕಿಸುವಂತೆ ಅಧಿಕಾರ ನೀಡಲಾಗುತ್ತದೆ ಎಂದವರು ತಿಳಿಸಿದರು.