ಯತ್ನಾಳ್ ಉಚ್ಚಾಟನೆ: ‘ವರಿಷ್ಠರ ನಿರ್ಧಾರವನ್ನು ಸಂಭ್ರಮಿಸಬೇಡಿ’

ಬೆಂಗಳೂರು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿರುವ ಪಕ್ಷದ ವರಿಷ್ಠರ ನಿರ್ಧಾರವನ್ನು ಸಂಭ್ರಮಿಸಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿ.ವೈ.ವಿಜಯೇಂದ್ರ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.

ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಅವರನ್ನು ಬುಧವಾರ ಬಿಜೆಪಿ ಹೈಕಮಾಂಡ್ ಪಕ್ಷದಿಂದ ಉಚ್ಚಾಟನೆ ಮಾಡಿದೆ. ಆ ಸುದ್ದಿ ಹರಡುತ್ತಿದ್ದಂತೆಯೇ ವಿಜಯೇಂದ್ರ ಬೆಂಬಲಿಗರು ಹಲವೆಡೆ ಸಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು. ಈ ಬೆಳವಣಿಗೆ ಬಗ್ಗೆ ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿರುವ ಬಿ.ವೈ.ವಿಜಯೇಂದ್ರ, ‘ಭಾರತೀಯ ಜನತಾ ಪಾರ್ಟಿ ಉದಾತ್ತ ಉದ್ದೇಶ ಹಾಗೂ ಗುರಿಯನ್ನಿಟ್ಟುಕೊಂಡು ಯೋಜಿತವಾಗಿ ಬೆಳೆದು ಕೋಟ್ಯಂತರ ಸಮರ್ಪಣಾ ಕಾರ್ಯಕರ್ತರನ್ನು ದೇಶ ಕಟ್ಟುವ ಬದ್ಧತೆಗಾಗಿ ಸಜ್ಜುಗೊಳಿಸಿದ ಪಕ್ಷ, ಅಶಿಸ್ತಿನ ವಿರುದ್ಧ ಇಂದು ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರವನ್ನು ಸಂಭ್ರಮಿಸಬಾರದೆಂದು ವಿನಂತಿಸುತ್ತೇನೆ’ ಎಂದಿದ್ದಾರೆ.

‘ಸಂಸ್ಕಾರವಂತ ಹಾಗೂ ಶಿಸ್ತುಬದ್ಧ ಸಂಘಟನೆಯ ವ್ಯವಸ್ಥೆಯಲ್ಲಿರುವ ನಾವು ಪಕ್ಷದ ವರಿಷ್ಠರು ಕೈಗೊಂಡ ನಿರ್ಧಾರವನ್ನು ಗೌರವಿಸಿ, ಮುಂಬರುವ ದಿನಗಳಲ್ಲಿ ಪಕ್ಷ ಕಟ್ಟುವ ನಿಟ್ಟಿನಲ್ಲಿ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೈಗೊಳ್ಳಬೇಕಿರುವ ಹೋರಾಟಗಳತ್ತ ಒಗ್ಗಟ್ಟಿನ ಸಂಕಲ್ಪ ತೊಟ್ಟು ಮುನ್ನಡೆಯೋಣ’ ಎಂದು ಕರೆ ನೀಡಿದ್ದಾರೆ.

Related posts