ಬೆಂಗಳೂರು: ಯುವ ಕಾಂಗ್ರೆಸ್ ಚುನಾವಣೆ ಮುಗಿದಿದೆ. ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಒಗ್ಗಟ್ಟಾಗಿ ಸೈದ್ಧಾಂತಿಕವಾಗಿ ರಾಜಕೀಯ ಎದುರಾಳಿಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಎಲ್ಲಾ ಬೂತ್ ಮಟ್ಟದಲ್ಲಿ ಹೋರಾಟ ಮಾಡಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಅರಮನೆ ಮೈದಾನದಲ್ಲಿ ಸೋಮವಾರ ನಡೆದ ‘ಯುವ ಸಂಕಲ್ಪ’ ಪದಗ್ರಹಣ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ. ಶಿವಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ವೇಳೆ ಮಾತನಾಡಿದ ಶಿವಕುಮಾರ್, ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಿದೆವು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನನ ಅದಿಕಾರಕ್ಕೆ ಬಂದಂತೆ ಎಂದರು.
ರಾಜಕೀಯದಲ್ಲಿ ಚುನಾವಣೆ ಗೆಲುವು ಸೋಲು ಸಹಜ. ಚುನಾವಣೆಯಲ್ಲಿ ಸ್ಪರ್ಧಿಸಿದವರೆಲ್ಲಾ ಗೆಲ್ಲಲು ಆಗುವುದಿಲ್ಲ. ಚುನಾವಣೆಯಲ್ಲಿ ಗೆದ್ದವರೆಲ್ಲಾ ನಾಯಕರಲ್ಲ. ಯಾರು ಪ್ರಾಮಾಣಿಕವಾಗಿ ಪಕ್ಷವನ್ನು ಶಿಸ್ತಿನಿಂದ ಸಂಘಟನೆ ಮಾಡುತ್ತಾರೋ, ಕಾಂಗ್ರೆಸ್ ತತ್ವ ಸಿದ್ಧಾಂತ ಬೆಳೆಸಿಕೊಂಡು, ದೇಶದ ಸಮಗ್ರತೆ, ಐಕ್ಯತೆ ಕಾಪಾಡಿಕೊಂಡು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತಿ ಕಾಪಾಡುವವರು ನಿಜವಾದ ನಾಯಕ. ಅವರೇ ನಿಜವಾದ ಕಾಂಗ್ರೆಸಿಗ ಎಂದರು.
ಶಿಸ್ತು ಇಲ್ಲದಿದ್ದರೆ ಯಾರೂ ನಾಯಕರಾಗುವುದಿಲ್ಲ. ಶಿಸ್ತೇ ನಿಮ್ಮ ಯಶಸ್ಸಿನ ಮೂಲಮಂತ್ರ. ಪೋಸ್ಟರ್ ಬ್ಯಾನರ್ ಹಾಕಿದಾಕ್ಷಣ ನೀವು ನಾಯಕರಾಗುವುದಿಲ್ಲ. ನಿಮ್ಮ ಸಮರ ಸಿದ್ದಾಂತದ ಮೇಲೆ ಇರಬೇಕು. ಬೂತ್ ಮಟ್ಟದಲ್ಲಿ ಬಿಜೆಪಿ ಹಾಗೂ ಜನತಾ ದಳದವರ ವಿರುದ್ಧ ಇರಬೇಕೇ ಹೊರತು ಪೋಸ್ಟರ್ ಹಾಕಿಕೊಂಡು ಮಾಡುವುದಲ್ಲ. ನಿಮ್ಮ ಪೋಸ್ಟರ್ ನಿಮ್ಮ ಬೂತ್ ಮಟ್ಟದಲ್ಲಿ ಇರಬೇಕು. ಪೋಸ್ಟರ್ ಹಾಕುವಾಗ ಶಿಷ್ಟಾಚಾರ ಪಾಲನೆ ಮಾಡಬೇಕು. ನಿಮಗೆ ಹಸ್ತದ ಚಿಹ್ನೆಗೆ ಮತ ಹಾಕುತ್ತಾರೆ ಎಂಬುದನ್ನು ಮರೆಯಬೇಡಿ. ಅಡುಗೆ ಬೆಂದಾಗ ರುಚಿ ಇರುತ್ತದೆ, ಅದೇ ರೀತಿ ಜೀವನದಲ್ಲಿ ನೊಂದಾಗ ನಮಗೆ ಬುದ್ಧಿ ಕಲಿಸುತ್ತದೆ. ನೀವು ನಿಮ್ಮಲ್ಲಿರುವ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ನಿಮ್ಮ ದೃಷ್ಟಿ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಜತೆಗಿರಬೇಕು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಿಮ್ಮ ವಿರುದ್ಧ ಟೀಕೆಗಳು ಬಂದರೂ ಧೃತಿಗೆಡದೆ, ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನು ಮಾಡಬೇಕು. ಸಂತೋಷದಲ್ಲಿ ಆಶ್ವಾಸನೆ, ಕೋಪದಲ್ಲಿ ಉತ್ತರ, ದುಃಖದಲ್ಲಿ ನಿರ್ಧಾರ ಮಾಡಬೇಡಿ. ನಾವೆಲ್ಲರೂ ಪಕ್ಷದ ಧ್ವಜವಾಗಿ ದೇಶದ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುತ್ತಿದ್ದೇವೆ. ಬಿಜೆಪಿ ಹಾಗೂ ಜನತಾ ದಳದವರು ಈ ಶಾಲನ್ನು ಹಾಕಿಕೊಳ್ಳಲು ಸಾಧ್ಯವೇ? ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಈ ಅವಕಾಶ ಸಿಗುತ್ತದೆ ಎಂದು ಹೇಳಿದರು.
ಬೂತ್ ಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಟ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವವನು ಮಾತ್ರ ನಿಜವಾದ ನಾಯಕ. ಇಲ್ಲಿ ಚುನಾವಣೆಯಲ್ಲಿ ಗೆದ್ದಿರುವವರಷ್ಟೇ ನಮ್ಮ ಪಾಲಿನ ನಾಯಕರಲ್ಲ. ನಿಮ್ಮ ಪರವಾಗಿ ಕೆಲಸ ಮಾಡಿ ನಿಮ್ಮನ್ನು ಗೆಲ್ಲಿಸಿರುವ ಕಾರ್ಯಕರ್ತರು ನಮ್ಮ ನಿಜವಾದ ನಾಯಕರು. ಅವೆರೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ನಿಮ್ಮ ಚುನಾವಣೆ ಮುಗಿದಿದೆ. ಇದು ಆಂತರಿಕ ಚುನಾವಣೆಯಷ್ಟೇ. ನಿಮ್ಮ ನಿಜವಾದ ಹೋರಾಟ ಏನೇ ಇದ್ದರು, ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆಯಲ್ಲಿ ತೋರಿಸಬೇಕು. 2028ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.