ಜನಾಕ್ರೋಶ ಏನಿದ್ದರೂ ಬೆಲೆ ಏರಿಕೆಗೆ ಕಾರಣವಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ: ಡಿಕೆಶಿ

ಬೆಂಗಳೂರು: ದೇಶದಲ್ಲಿ ಇಂಧನ, ಅಗತ್ಯ ವಸ್ತುಗಳು, ರಸಗೊಬ್ಬರ, ಚಿನ್ನ, ಸಿಮೆಂಟ್, ಕಬ್ಬಿಣ ಸೇರಿದಂತೆ ಪ್ರತಿಯೊಂದು ವಸ್ತುಗಳ ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಜನರ ಮೇಲೆ ಈ ಬೆಲೆ ಏರಿಕೆ ಹೊರೆ ತಗ್ಗಿಸಲು ನಾವು ಗ್ಯಾರಂಟಿ ಯೋಜನೆ ಕೊಟ್ಟಿದ್ದು, ರೈತರ ಬದುಕು ಕಾಪಾಡಲು ಹಾಲಿನ ಬೆಲೆ ಏರಿಸಿದ್ದೇವೆ. ಹೀಗಾಗಿ ಜನಾಕ್ರೋಶ ಏನಿದ್ದರೂ ಬಿಜೆಪಿ ಸರ್ಕಾರದ ವಿರುದ್ಧ ವ್ಯಕ್ತವಾಗಲಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದರು.

ಕೇಂದ್ರ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆದ ಶಿವಕುಮಾರ್ ಅವರು ಮಾತನಾಡಿದರು. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಬೆಲೆ ಏರಿಕೆಗೆ ಮೂಲ ಕಾರಣ ಕೇಂದ್ರ ಬಿಜೆಪಿ ಸರ್ಕಾರ. ಹೀಗಾಗಿ ಬಿಜೆಪಿ ನಾಯಕರ ಆಕ್ರೋಶ ಏನಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಇರಬೋಕೇ ಹೊರತು, ಬಡವರ ಪರವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿರುವ ಕಾಂಗ್ರೆಸ್ ಸರ್ಕಾರವಲ್ಲ ಎಂದರು.

ಬಿಜೆಪಿಯಲ್ಲಿ ಹಾಗೂ ಜನತಾ ದಳದಲ್ಲಿ ಆಂತರಿಕ ಜಗಳ, ನಾಯಕತ್ವದ ಕೊರತೆ ಮುಚ್ಚಿಡಲು ಇಂದು ರಾಜ್ಯಾದ್ಯಂತ ಹೋರಾಟ ಮಾಡಲು ಮುಂದಾಗಿದ್ದಾರೆ. ನಮ್ಮದು ರೈತಪರ ಸರ್ಕಾರ, ಎಲ್ಲಾ ವರ್ಗದ ಜನರ ಪರವಾದ ಸರ್ಕಾರ. ನಾವು ರೈತರಿಗೆ ನೆರವಾಗಲು ಹಾಲಿನ ಬೆಲೆ ರೂ.4 ಹೆಚ್ಚಳ ಮಾಡಿದ್ದೇವೆ. ದನಕರುಗಳ ಮೇವುಗಳಾದ ಇಂಡಿ, ಬೂಸಾ ಬೆಲೆ ಹೆಚ್ಚಾಗಿದೆ. ಹೀಗಾಗಿ ನಾವು ರೈತರಿಗೆ ನೆರವಾಗಲು ರೂ.4 ಹೆಚ್ಚಿಗೆ ಸಿಗುವಂತೆ ಮಾಡಿದರೆ ಪ್ರತಿಭಟನೆ ಮಾಡುತ್ತೀರಿ. ಆಮೂಲಕ ನೀವು ರೈತ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದೀರಿ” ಎಂದು ಹರಿಹಾಯ್ದರು.

ಬೆಲೆ ಹೆಚ್ಚಿಸಿದರೂ ಹಾಲಿನ ದರ ನಮ್ಮಲ್ಲೇ ಕಡಿಮೆ:

“ಹಾಲಿನ ಬೆಲೆ ಕೇರಳದಲ್ಲಿ 52, ಗುಜರಾತ್ 53, ದೆಹಲಿ 55, ಮಹಾರಾಷ್ಟ್ರದಲ್ಲಿ 52, ತೆಲಂಗಾಣದಲ್ಲಿ 58, ಅಸ್ಸಾಂ 60, ಹರಿಯಾಣದಲ್ಲಿ 56, ರಾಜಸ್ಥಾನದಲ್ಲಿ 50, ಮಧ್ಯಪ್ರದೇಶದಲ್ಲಿ 52, ಪಂಜಾಬ್ ನಲ್ಲಿ 56, ಉತ್ತರ ಪ್ರದೇಶದಲ್ಲಿ 56 ರೂಪಾಯಿಗಳಿವೆ. ನಮ್ಮ ರಾಜ್ಯದಲ್ಲಿ ಈ ಎಲ್ಲಾ ರಾಜ್ಯಗಳಿಗಿಂತ 10-12 ರೂಪಾಯಿ ಕಡಿಮೆ ಇದೆ. ನಾವು ರೈತರ ಬದುಕು ರಕ್ಷಣೆಗೆ 4 ರೂಪಾಯಿ ಹೆಚ್ಚಿಸಿದ್ದೇವೆ. ನೀವು ಮಳೆ, ಗಾಳಿಗೆ ಹೆದರಿ ಜನಾಕ್ರೋಶ ಯಾತ್ರೆ ಕೈಬಿಟ್ಟಿದ್ದೀರಿ.

ಕೇಂದ್ರ ಬಿಜೆಪಿ ಸರ್ಕಾರದಿಂದ ಸಿಮೆಂಟ್, ಕಬ್ಬಿಣ, ಅಡುಗೆ ಎಣ್ಣೆ, ಸೋಪು, ಉಪ್ಪು, ಟಿವಿ, ಟೂತ್ ಬ್ರೇಷ್, ಸೇರಿದಂತೆ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಕಳೆದ 11 ವರ್ಷಗಳಿಂದ ಹೆಣ್ಣು ಮಕ್ಕಳು ಚಿನ್ನದ ಮಾಂಗಲ್ಯ ಸರ ಖರೀದಿಸಲು ಸಾಧ್ಯವಾಗುತ್ತಿಲ್ಲ. 10 ಗ್ರಾಂ ಚಿನ್ನ 40 ಸಾವಿರದಿಂದ 96 ಸಾವಿರಕ್ಕೆ ಏರಿಕೆಯಾಗಿದೆ. 10 ಸಾವಿರ ಇದ್ದ ಮೊಬೈಲ್ 30 ಸಾವಿರವಾಗಿದೆ. ಸಿಮೆಂಟ್ 268 ರಿಂದ 410 ಆಗಿದೆ. ಇದಕ್ಕೆಲ್ಲ ಯಾರು ಕಾರಣ? ಬಿಜೆಪಿ. ಹೀಗಾಗಿ ಜನಾಕ್ರೋಶ ಬಿಜೆಪಿ ಸರ್ಕಾರದ ವಿರುದ್ಧ ಆಗಬೇಕು” ಎಂದು ತಿರುಗೇಟು ನೀಡಿದರು.

“ರಾಜ್ಯ ಹಾಗೂ ದೇಶದ ಜನ ಬೆಲೆ ಏರಿಕೆಯಿಂದ ತತ್ತರಿಸಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಭಾರತ ಜೋಡೋ ಯಾತ್ರೆ ಮಾಡಿದೆವು. 2023ರ ವಿಧಾನಸಭೆ ಚುನಾವಣೆಯಲ್ಲಿ ನಾನು ಭವಿಷ್ಯ ನುಡಿದಂತೆ 136 ಸೀಟು ಗೆದ್ದೆವು. ನಂತರ ಬಂದ ಉಪಚುನಾವಣೆಗಳಲ್ಲಿ ಚನ್ನಪಟ್ಟಣ, ಶಿಗ್ಗಾಂವ್ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಈ ಮೂರರಲ್ಲಿ ಜನ ಎರಡು ಕ್ಷೇತ್ರಗಳಲ್ಲಿ ಮಾಜಿ ಮುಖ್ಯಮಂತ್ರಿಗಳ ಮಕ್ಕಳನ್ನು ಸೋಲಿಸಿದರು. ಇದಕ್ಕೆ ಕಾರಣವೇನು ಎಂದು ಬಿಜೆಪಿ ನಾಯಕರು ಹೇಳಬೇಕು” ಎಂದು ಪ್ರಶ್ನಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕುಸಿದಿದ್ದರೂ ಬಿಜೆಪಿಯವರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ದಾರೆ. ಆದರೂ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ. ಈ ಬಗ್ಗೆ ಬಿಜೆಪಿಯವರು ಮಾತನಾಡಬೇಕು. ಇದು ರಾಜ್ಯಮಟ್ಟದ ಹೋರಾಟ. ಇದೇ ಮಾದರಿಯಲ್ಲಿ ಜಿಲ್ಲಾ ಸಚಿವರ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಬೇಕು ಎಂದು ಶಾಸಕರು ಹಾಗೂ ಜಿಲ್ಲಾಧ್ಯಕ್ಷರಿಗೆ ಸೂಚನೆ ನೀಡುತ್ತೇನೆ. ಬೆಲೆ ಏರಿಕೆ ವಿಚಾರವಾಗಿ ರಾಜ್ಯದ ಜನರಿಗೆ ತಿಳಿಸಬೇಕು” ಎಂದು ಸೂಚಿಸಿದರು.

Related posts