ಜಮಖಂಡಿ ಸಮೀಪ ಭೀಕರ ಅಪಘಾತ: ಎರಡು ವರ್ಷದ ಮಗು ಸೇರಿ ನಾಲ್ವರು ಸಾವು

ಬಾಗಲಕೋಟೆ: ಜಮಖಂಡಿ ಸಮೀಪ ಸಂಭವಿಸಿದ ಭೀಕರ ಅಪಘಾತದಲ್ಲಿ ಎರಡು ವರ್ಷದ ಮಗು ಸೇರಿದಂತೆ ನಾಲ್ವರು ದುರ್ಮರಣ ಹೊಂದಿದ್ದಾರೆ. ಬಾಗಲಕೋಟೆ ತಾಲೂಕಿನ ಕಟ್ಟೆಕೆರೆ ಸಮೀಪ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ.

ಮೃತರನ್ನು ಮನೀಷ್ ಪಾಂಡೆ (23), ಹಲಕಿ ಪಾಂಡೆ (2), ಲಕ್ಷ್ಮಿ ಚಿರಮಡಿ (27) ಹಾಗೂ ರೇಖಾ ಭೂಕೆ ಎಂದು ಗುರುತಿಸಲಾಗಿದೆ.

ಮೃತರು ಮಹಾರಾಷ್ಟ್ರ ರಾಜ್ಯದ ಯುವತ್ಮಾಳ್ ಜಿಲ್ಲೆಯ ಬೂಸಾ ತಾಲ್ಲೂಕಿನ ಗುಪವಾಡಿ ಗ್ರಾಮದ ನಿವಾಸಿಗಳಾಗಿದ್ದು, ಕಬ್ಬಿನ ಕಟಾವು ಕೆಲಸಕ್ಕಾಗಿ ಜಮಖಂಡಿ ಭಾಗಕ್ಕೆ ಆಗಮಿಸಿದ್ದರು ಎಂದು ತಿಳಿದುಬಂದಿದೆ.

ಕಬ್ಬಿನ ಕಟಾವು ಕಾರ್ಯಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್‌ ಟ್ರ್ಯಾಲಿ ಏಕಾಏಕಿ ಕಟ್‌ ಆಗಿ ಪಲ್ಟಿಯಾದ ಪರಿಣಾಮ ದುರ್ಘಟನೆ ಸಂಭವಿಸಿದೆ. ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಂದಿನ ತನಿಖೆ ಮುಂದುವರಿದಿದೆ.

Related posts