‘ದೃಶ್ಯಂ 3’ ಬಿಡುಗಡೆ ಮುಂದೂಡಿಕೆ; ಮೋಹನ್ ಲಾಲ್ ಹುಟ್ಟುಹಬ್ಬದಂದು ಥಿಯೇಟರ್‌ಗಳಿಗೆ ಎಂಟ್ರಿ

ಮುಂಬೈ: ಮಲಯಾಳಂ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರ ‘ದೃಶ್ಯಂ 3’ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ. ಇದೀಗ ಈ ಚಿತ್ರವು ಮೇ 21ರಂದು, ನಟ ಮೋಹನ್ ಲಾಲ್ ಅವರ ಹುಟ್ಟುಹಬ್ಬದಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಮೊದಲಿಗೆ ಏಪ್ರಿಲ್ 2ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ತಯಾರಕರು ಮುಂದೂಡಿದ್ದು, ಹೊಸ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡ ಮೋಹನ್ ಲಾಲ್, “ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ… ಅದು ಕಾಯುತ್ತದೆ. ಜಾರ್ಜ್‌ಕುಟ್ಟಿ ಮೇ 21, 2026ರಂದು ಬರುತ್ತಾನೆ” ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದ ನಿರ್ದೇಶನವನ್ನು ಜೀತು ಜೋಸೆಫ್ ಮಾಡಿದ್ದು, ಬಿಡುಗಡೆ ಮುಂದೂಡಿಕೆಗೆ ಪಶ್ಚಿಮ ಏಷ್ಯಾದ ಉದ್ವಿಗ್ನತೆಯೂ ಒಂದು ಕಾರಣವಾಗಿರಬಹುದು ಎಂದು ವರದಿಗಳು ಸೂಚಿಸುತ್ತಿವೆ.

‘ದೃಶ್ಯಂ 3’ ಚಿತ್ರದಲ್ಲಿ ಮೋಹನ್ ಲಾಲ್ ಮತ್ತೆ ಜಾರ್ಜ್‌ಕುಟ್ಟಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮೀನಾ, ಅನ್ಸಿಬಾ ಹಸನ್, ಎಸ್ತರ್ ಅನಿಲ್, ಆಶಾ ಶರತ್, ಸಿದ್ದಿಕ್ ಸೇರಿದಂತೆ ಪ್ರಮುಖ ಕಲಾವಿದರು ನಟಿಸಿದ್ದಾರೆ.

ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟನಿ ಪೆರುಂಬವೂರ್ ನಿರ್ಮಿಸಿರುವ ಈ ಚಿತ್ರ, ಈಗಾಗಲೇ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.

2013ರಲ್ಲಿ ಬಿಡುಗಡೆಯಾದ ‘ದೃಶ್ಯಂ’ ಮೊದಲ ಭಾಗ ಮಲಯಾಳಂ ಸಿನೆಮಾದಲ್ಲಿ ಹೊಸ ಮಾನದಂಡ ನಿರ್ಮಿಸಿತ್ತು. ಬಳಿಕ 2021ರಲ್ಲಿ ಬಿಡುಗಡೆಯಾದ ಅದರ ಮುಂದುವರಿದ ಭಾಗವೂ ದೊಡ್ಡ ಯಶಸ್ಸು ಕಂಡಿತ್ತು. ಇದೀಗ ಮೂರನೇ ಭಾಗದ ಮೂಲಕ ಕಥೆ ಮತ್ತೆ ಪ್ರೇಕ್ಷಕರನ್ನು ಸೆಳೆಯಲು ಸಜ್ಜಾಗಿದೆ.

Related posts