ಬೆಂಗಳೂರು: ದೆಹಲಿ ಪೊಲೀಸರು ನೀಡಿರುವ ನೋಟಿಸ್ ಕುರಿತಂತೆ ಕೋರ್ಟ್ ಮೊರೆಹೋಗಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ಧರಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
“ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಾವುದೇ ಎಫ್ ಐಆರ್ ಇಲ್ಲದೇ ಇ.ಡಿ ಈ ಪ್ರಕರಣವನ್ನು ಹೇಗೆ ಕೈಗೆತ್ತಿಕೊಂಡಿತು. ನಮ್ಮ ಮೇಲೂ ಇ.ಡಿ ಬೇಕಾದಷ್ಟು ಪ್ರಕರಣಗಳನ್ನು ದಾಖಲಿಸಿತ್ತು. ಕೊನೆಗೆ ಏನಾಯಿತು? ಜೈಲಿನಲ್ಲಿ ಇಟ್ಟರು. ತುಘಲಕ್ ಪೊಲೀಸ್ ಠಾಣೆಯಲ್ಲಿ ಇಟ್ಟರು” ಎಂದರು.
“ಸೋನಿಯಾಗಾಂಧಿ ಅವರು ಹಾಗೂ ರಾಹುಲ್ ಗಾಂಧಿ ಅವರಿಗೂ ಇದೇ ರೀತಿ ಮಾಡಲು ಹೊರಟರು ಆದರೆ ಧೈರ್ಯ ಸಾಲದೆ ಚಾರ್ಜ್ ಶೀಟ್ ಹಾಕಿದರು. ನ್ಯಾಯಾಲಯ ಇದನ್ನು ತಿರಸ್ಕರಿಸಿತು. ನ್ಯಾಯಾಲಯವು ಪೊಲೀಸರ ಬಳಿ ಚಾರ್ಜ್ ಶೀಟ್ ಎಲ್ಲಿ, ಎಫ್ ಐಆರ್ ಎಲ್ಲಿ ಎಂದು ಕೇಳಿತು. ನಮ್ಮ ವಕೀಲರಾದ ಅಭಿಷೇಕ್ ಮನುಸಿಂಗ್ವಿ ಅವರು ವಾದ ಮಾಡಿದರು. ಇವರು ಕಾನೂನುಗಳನ್ನು ಪರಿಶೀಲಿಸಿದಾಗ, ಯಾವುದೇ ವ್ಯಕ್ತಿ ದೂರು ನೀಡಿದರೆ ಪ್ರಕರಣದಾಖಲಿಸಲು ಬರುವುದಿಲ್ಲ. ಯಾವುದಾದರೂ ಸಂಸ್ಥೆ ಮುಖಾಂತರ ದೂರು ನೀಡಬೇಕು” ಎಂದರು.
“ನನಗೂ ದೆಹಲಿ ಪೊಲೀಸರು ನೋಟಿಸ್ ನೀಡಿದ್ದರು. ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು. ನೋಟಿಸ್ ಗೆ ಉತ್ತರ ನೀಡಲು ಮಂಗಳವಾರ ದೆಹಲಿಗೆ ನಾನು ತೆರಳಬಹುದು” ಎಂದರು.
“ಪಕ್ಷಕ್ಕೆ ಹಾಗು ಪಕ್ಷದ ಕಾರ್ಯಕ್ರಮಗಳಿಗೆ ಹಣ ನೀಡದೆ ಇನ್ನು ಯಾವ ಕೆಲಸಗಳಿಗೆ, ಇನ್ಯಾರಿಗೆ ಹಣ ನೀಡಬೇಕು. ಎಲ್ಲಾ ಶಾಸಕರಿಂದಲೂ ಹಣ ಸಂಗ್ರಹ ಮಾಡಲಾಗುತ್ತಿದೆ. ಎಸ್.ಎಸ್. ಮಲ್ಲಿಕಾರ್ಜುನ ಅವರ ಸಂಬಂಧಿಕರು 5 ಕೋಟಿ ರೂಪಾಯಿ ಹಣ ನೀಡಿದ್ದಾರೆ. ನಾವುಗಳು ಏನು ತಪ್ಪು ಮಾಡಿಲ್ಲ. ನಾವು ದುಡಿದ ಹಣವನ್ನೇ ನೀಡಿದ್ದೇವೆ. ಕಪ್ಪು ಹಣ ನೀಡಿಲ್ಲ. ಸ್ವಂತ ಹಣದಿಂದ ದೇಣಿಗೆ ನೀಡಿದ್ದೇನೆ” ಎಂದು ಹೇಳಿದರು.
“ಬಿಜೆಪಿಯವರು ಕೋಟ್ಯಂತರ ರೂಪಾಯಿಯನ್ನು ದೇಣಿಗೆ ಪಡೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಎಷ್ಟೆಷ್ಟು ಕೋಟಿ ಹಣವನ್ನು ಚುನಾವಣಾ ಬಾಂಡ್ ಮೂಲಕ ಪಡೆದಿದ್ದಾರೆ ಎಂದು ಪತ್ರಿಕೆಗಳಲ್ಲಿ ಬಂದಿದೆ. ಸೆಕ್ಷನ್ 25 ರ ಅಡಿ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯನ್ನು ನೋಂದಣಿ ಮಾಡಿಸಲಾಗಿದೆ. ಕಾಂಗ್ರೆಸ್ ಪಕ್ಷ ಈ ಸಂಸ್ಥೆಗೆ ಸಾಲ ನೀಡಿತು. ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಹೆಸರಿಗೆ ಷೇರುಗಳು ವರ್ಗಾವಣೆಯಾಗುತ್ತವೆ. ನಾನು ಕೂಡ ಕಾಂಗ್ರೆಸ್ ಭವನದ ಟ್ರಸ್ಟಿ. ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಇದ್ದೇನೆ ಎಂದರೆ ನನ್ನ ಹೆಸರಿಗೆ ಆಸ್ತಿಗಳು ನೋಂದಾಯಿಸಲ್ಪಡುತ್ತವೆ. ಬೇರೆಯವರು ಬಂದಾಗ ಅವರ ಹೆಸರಿಗೆ ಹೋಗುತ್ತದೆ” ಎಂದರು.
