ಮೈಸೂರು: ರಾಜ್ಯ ಕಾಂಗ್ರೆಸ್ನಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆ ನಡೆಯುತ್ತಿರುವ ನಡುವೆ, ಜೆಡಿಎಸ್ನಲ್ಲೂ ಚರ್ಚೆಗಳು ತೀವ್ರಗೊಂಡಿವೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ತಮ್ಮ ಪಕ್ಷ ನಿಷ್ಠೆಯನ್ನು ಸ್ಪಷ್ಟಪಡಿಸಿದ್ದು, “ನಾನು ಜೆಡಿಎಸ್ನಲ್ಲಿಯೇ ಇದ್ದೇನೆ. ಎಲ್ಲಿಯೂ ಹೋಗುವುದಿಲ್ಲ. ಮುಂದಿನ ಚುನಾವಣೆಯಲ್ಲೂ ಜೆಡಿಎಸ್ನಿಂದಲೇ ಸ್ಪರ್ಧಿಸುತ್ತೇನೆ” ಎಂದು ಹೇಳಿದ್ದಾರೆ.
ನಾನು ಯಾವುದೇ ನಾಯಕರಿಗೂ ದ್ರೋಹ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದರಲ್ಲಿ ಎರಡು ಬಾರಿ ಹುಣಸೂರು ಕ್ಷೇತ್ರದಿಂದ ಹಾಗೂ ಮೂರು ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲುವು ಸಾಧಿಸಿದ್ದೇನೆ. ಜೆಡಿಎಸ್ ಪಕ್ಷದ ಸಂಘಟನೆಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದು, ಈಗಲೂ ಪಕ್ಷದಿಂದ ದೂರ ಉಳಿದಿಲ್ಲ ಎಂದು ಹೇಳಿದರು.
ಯಾರನ್ನೂ ಟೀಕಿಸದೆ, ಕ್ಷೇತ್ರದ ಅಭಿವೃದ್ಧಿ ಕೆಲಸಗಳಲ್ಲಿಯೇ ತೊಡಗಿಸಿಕೊಂಡಿದ್ದೇನೆ. ಜೆಡಿಎಸ್ ಪಕ್ಷವನ್ನು ಕಟ್ಟುವಲ್ಲಿ ನಾನು ವಹಿಸಿದ ಪಾತ್ರದ ಬಗ್ಗೆ ಹಿರಿಯ ನಾಯಕ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗೆ ಚೆನ್ನಾಗಿ ಗೊತ್ತಿದೆ ಎಂದು ಅವರು ಹೇಳಿದರು.
ಮೂರು ಬಾರಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆದ್ದಿರುವ ನಾನು ಮುಂದೆಯೂ ಜೆಡಿಎಸ್ನಲ್ಲಿಯೇ ಮುಂದುವರೆಯುತ್ತೇನೆ. ಜೆಡಿಎಸ್ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸುವುದು ಖಚಿತ. ಈ ಬಗ್ಗೆ ಯಾರೂ ಆತಂಕಪಡಬೇಕಾಗಿಲ್ಲ. ನನಗೂ ಆತಂಕವಿಲ್ಲ, ಕಾರ್ಯಕರ್ತರಿಗೂ ಇಲ್ಲ ಎಂದು ಜಿ.ಟಿ. ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
