ಮುಂಬೈ: ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರ ‘ಕೋಮುವಾದಿ’ ಹೇಳಿಕೆ ವಿವಾದದ ನಡುವೆ, ನಟಿ ಹಾಗೂ ನಿರ್ದೇಶಕಿ ಕಂಗನಾ ರನೌತ್ ತಮ್ಮ ನಿರ್ದೇಶನದ ಎಮರ್ಜೆನ್ಸಿ ಚಿತ್ರದ ಸಂದರ್ಭದಲ್ಲಿನ ‘ಅಹಿತಕರ ಅನುಭವ’ವನ್ನು ನೆನಪಿಸಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೋರೀಸ್ನಲ್ಲಿ ಪೋಸ್ಟ್ ಮಾಡಿರುವ ಕಂಗನಾ, ಚಿತ್ರಕ್ಕಾಗಿ ರೆಹಮಾನ್ ಅವರನ್ನು ಭೇಟಿಯಾಗಿ ಕಥಾನಕವನ್ನು ವಿವರಿಸಲು ತಾವು ಉತ್ಸುಕರಾಗಿದ್ದೆವು. ಆದರೆ, ಅವರು ಪ್ರಚಾರ ಚಿತ್ರದ ಭಾಗವಾಗಲು ಇಚ್ಛಿಸಿಲ್ಲ ಎಂದು ಹೇಳಿಕೊಂಡು ಭೇಟಿಗೂ ನಿರಾಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ತಮ್ಮ ರಾಜಕೀಯ ನಿಲುವಿನ ಕಾರಣಕ್ಕೆ ಚಿತ್ರರಂಗದಲ್ಲಿ ಪೂರ್ವಾಗ್ರಹ ಮತ್ತು ಪಕ್ಷಪಾತವನ್ನು ಎದುರಿಸಬೇಕಾಗುತ್ತಿದೆ ಎಂದು ಕಂಗನಾ ದೂರಿದ್ದಾರೆ.
“ನಾನು ಕೇಸರಿ ಪಕ್ಷವನ್ನು ಬೆಂಬಲಿಸುವುದರಿಂದ ನನಗೆ ಚಿತ್ರರಂಗದಲ್ಲಿ ಪಕ್ಷಪಾತ ಎದುರಾಗುತ್ತಿದೆ. ಆದರೆ ನಿಮ್ಮಷ್ಟು ಪೂರ್ವಾಗ್ರಹಪೀಡಿತ ಮತ್ತು ದ್ವೇಷಪೂರಿತ ವ್ಯಕ್ತಿಯನ್ನು ನಾನು ನೋಡಿಲ್ಲ. ಎಮರ್ಜೆನ್ಸಿ ಬಗ್ಗೆ ನಿಮಗೆ ಹೇಳಲು ಬಯಸಿದ್ದೆ, ಆದರೆ ನೀವು ಭೇಟಿಗೂ ನಿರಾಕರಿಸಿದ್ದೀರಿ” ಎಂದು ಕಂಗನಾ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇದಕ್ಕೆ ವಿರುದ್ಧವಾಗಿ, ಎಮರ್ಜೆನ್ಸಿ ಚಿತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ ಎಂದು ಕಂಗನಾ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕರಿಂದಲೂ ಚಿತ್ರದ ಸಮತೋಲಿತ ಮತ್ತು ಸಹಾನುಭೂತಿಯ ದೃಷ್ಟಿಕೋನವನ್ನು ಶ್ಲಾಘಿಸುವ ಪತ್ರಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.
