ನೆಲಮಂಗಲ-ತುಮಕೂರು 12 ಪಥಗಳ ಹೆದ್ದಾರಿ ಕಾಮಗಾರಿ 2027ರ ಮಾರ್ಚ್ ತಿಂಗಳೊಳಗೆ ಪೂರ್ಣ; ಸುಧಾಕರ್

ಬೆಂಗಳೂರು: ನೆಲಮಂಗಲದಿಂದ ತುಮಕೂರುವರೆಗೆ ಸುಮಾರು 44 ಕಿಮೀ ಉದ್ದದ 12 ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 2027ರ ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸುವ ವಿಶ್ವಾಸವನ್ನು ಸಂಸದ ಡಾ.ಸುಧಾಕರ್ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಭಾರತ್ ಮಾಲಾ ಯೋಜನೆಯಡಿ ನೆಲಮಂಗಲದಿಂದ ತುಮಕೂರುವರೆಗೆ ಸುಮಾರು ₹2,000 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ 44 ಕಿಮೀ ಉದ್ದದ 12 ಪಥಗಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಶನಿವಾರ ಅವರು ಪರಿಶೀಲಿಸಿದರು.

ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಅವರು, ಈ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆಯಲ್ಲಿದ್ದ ತೊಡಕುಗಳಿಂದ ಕಾಮಗಾರಿ ವಿಳಂಬವಾಗಿದ್ದು, 2027ರ ಮಾರ್ಚ್ ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ನಿರ್ಮಾಣ ಹಂತದಲ್ಲಿರುವ ಈ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳಿದ್ದು, ಈ ನಿಟ್ಟಿನಲ್ಲಿ ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿ, ಬ್ಲಾಕ್ ಸ್ಪಾಟ್ ಪ್ರದೇಶಗಳಲ್ಲಿ ಬೆಳಕಿನ ವ್ಯವಸ್ಥೆ, ಎಚ್ಚರಿಕೆ ಫಲಕಗಳು, ಪೇಂಟಿಂಗ್ ಹಾಗೂ ಸುರಕ್ಷತಾ ಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕು, ಜೊತೆಗೆ ಅಪಘಾತ ನಿಯಂತ್ರಣ ಕ್ರಮಗಳನ್ನು ಕೂಡ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿರುವುದಾಗಿ ತಿಳಿಸಿದರು.

ಇದರ ಜೊತೆಗೆ ಗ್ರಾಮಗಳಿಗೆ ಅಂಡರ್ ಪಾಸ್, ಸರ್ವಿಸ್ ರಸ್ತೆ ನಿರ್ಮಾಣ ಕುರಿತಂತೆ ಅಧಿಕಾರಿಗಳಿಗೆ ಅಗತ್ಯ ಸಲಹೆ ನೀಡಿ ಒಟ್ಟಾರೆ ಈ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು ಎಂದು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದಾರೆ.

Related posts