ಪಿಎಸ್‌ಐ ನೇಮಕಾತಿ ಅಕ್ರಮದ ಪ್ರತಿಧ್ವನಿ;: EDಯಿಂದ 1.53 ಕೋ.ರೂ. ಮೌಲ್ಯದ ಆಸ್ತಿ ಮುಟ್ಟುಗೋಲು

ಬೆಂಗಳೂರು: ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) 1.53 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. 2002ರ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಬೆಂಗಳೂರು ವಲಯ ಕಚೇರಿ ಈ ಕ್ರಮ ಕೈಗೊಂಡಿದೆ ಎಂದು ಇಡಿ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳಲ್ಲಿ ಮಾಜಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ನೇಮಕಾತಿ) ಅಮೃತ್ ಪಾಲ್ ಹಾಗೂ ಮುಖ್ಯ ಕಾನ್‌ಸ್ಟೆಬಲ್ ಶ್ರೀಧರ್ ಹೆಚ್ ಅವರಿಗೆ ಸೇರಿದ ವಸತಿ ಆಸ್ತಿಗಳು ಸೇರಿವೆ. 2021–22ರ ಅವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕ ಪೊಲೀಸ್ ನೇಮಕಾತಿ ಕೋಶವು 545 ಪಿಎಸ್‌ಐ ಹುದ್ದೆಗಳ ಭರ್ತಿಗೆ ಪರೀಕ್ಷೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದ್ದರೂ, ಬಳಿಕ ಪರೀಕ್ಷಾ ಪ್ರಕ್ರಿಯೆಯಲ್ಲಿ ವಂಚನೆ ಮತ್ತು ಭ್ರಷ್ಟಾಚಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಸಂಬಂಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು.

ತನಿಖೆಯಲ್ಲಿ, ನೇಮಕಾತಿಗೆ ಸಂಬಂಧಿಸಿದ OMR ಉತ್ತರ ಪತ್ರಿಕೆಗಳನ್ನು ಇಡಲಾಗಿದ್ದ ಸ್ಟ್ರಾಂಗ್ ರೂಮ್‌ಗೆ ಅನಧಿಕೃತ ಪ್ರವೇಶ ಕಲ್ಪಿಸುವಲ್ಲಿ ಅಮೃತ್ ಪಾಲ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಇಡಿ ತಿಳಿಸಿದೆ. ಸ್ಟ್ರಾಂಗ್ ರೂಮ್ ಕೀಲಿಗಳನ್ನು ಉಪ ಪೊಲೀಸ್ ವರಿಷ್ಠಾಧಿಕಾರಿ ಶಾಂತ್ ಕುಮಾರ್ ಅವರಿಗೆ ಹಸ್ತಾಂತರಿಸುವ ಮೂಲಕ ಉತ್ತರ ಪತ್ರಿಕೆಗಳ ತಿರುಚುವಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಆರೋಪಿಸಲಾಗಿದೆ.

ಅರ್ಹತೆಯಿಲ್ಲದ ಅಭ್ಯರ್ಥಿಗಳಿಂದ ಪ್ರತಿ ಅಭ್ಯರ್ಥಿಗೆ 30 ಲಕ್ಷದಿಂದ 70 ಲಕ್ಷ ರೂ.ವರೆಗೆ ಲಂಚ ವಸೂಲಿಸಲಾಗಿದೆ ಎನ್ನಲಾಗಿದೆ. ಈ ಅಕ್ರಮ ಆದಾಯವನ್ನು ಕೈ ಸಾಲಗಳ ರೂಪದಲ್ಲಿ ತೋರಿಸಿ ವಸತಿ ಆಸ್ತಿಗಳ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಇಡಿ ಹೇಳಿದೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

Related posts