ಹಣಕಾಸಿನ ವಂಚನೆ, ಸಹಕಾರದ ಕೊರತೆ: ನೇಪಾಳದಲ್ಲಿ ಟೆಲಿಗ್ರಾಮ್ ನಿಷೇಧ

ಕಠ್ಮಂಡು: ಆರ್ಥಿಕ ವಂಚನೆ ಹಾಗೂ ಕಾನೂನು ಜಾರಿಗೆ ಸಹಕಾರ ನೀಡದ ಕಾರಣ ಮುಂದಿಟ್ಟುಕೊಂಡು ನೇಪಾಳ ದೂರಸಂಪರ್ಕ ಪ್ರಾಧಿಕಾರ (ಎನ್‌ಟಿಎ) ದೇಶದ ಎಲ್ಲಾ ಟೆಲಿಕಾಂ ಸೇವಾ ಪೂರೈಕೆದಾರರಿಗೆ ‘ಟೆಲಿಗ್ರಾಮ್’ ಸಂದೇಶಾಪ್ಲಿಕೇಶನ್‌ನ್ನು ತಕ್ಷಣವೇ ನಿರ್ಬಂಧಿಸಲು ಶುಕ್ರವಾರ ಆದೇಶ ಹೊರಡಿಸಿದೆ.

ಇದು ದೇಶದ ಪೊಲೀಸ್ ಸೈಬರ್ ಬ್ಯೂರೋ ನೀಡಿದ ನಿರಂತರ ಎಚ್ಚರಿಕೆಗಳಿಗೆ ಪ್ರತಿಕ್ರಿಯೆಯಾಗಿ ಬಂದ ನಿರ್ಧಾರವಾಗಿದೆ. ‘ಟೆಲಿಗ್ರಾಮ್’ ಆನ್‌ಲೈನ್ ವಂಚನೆ, ನಕಲಿ ಉದ್ಯೋಗ ಆಹ್ವಾನಗಳು, ಕ್ರಿಪ್ಟೋಕರೆನ್ಸಿ ಹಗರಣ ಹಾಗೂ ಹಣ ವರ್ಗಾವಣೆಗಾಗಿ ವೇದಿಕೆಯಾಗಿ ಬಳಸಲಾಗುತ್ತಿದೆ ಎಂಬ ಆರೋಪಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಸೈಬರ್ ಅಪರಾಧಗಳ ಮೇಲೆ ತ್ವರಿತ ಕ್ರಮ ಕೈಗೊಳ್ಳುವಂತೆ ಪ್ರಧಾನ ಮಂತ್ರಿ ಕಚೇರಿಯು ದೂರಸಂಪರ್ಕ ಹಾಗೂ ಐಟಿ ಸಚಿವಾಲಯಕ್ಕೆ ಪತ್ರ ಬರೆದಿತ್ತು. ನಂತರ ಸಚಿವಾಲಯ ಎನ್‌ಟಿಎಗೆ ‘ಟೆಲಿಗ್ರಾಮ್’ ನಿರ್ಬಂಧಿಸಲು ತುರ್ತು ಸೂಚನೆ ನೀಡಿತು.

ಕಾನೂನು ಜಾರಿಗೆ ಸಂಬಂಧಿಸಿದ ವಿಚಾರಗಳಲ್ಲಿ ‘ಟೆಲಿಗ್ರಾಮ್’ ಸಹಕರಿಸಲು ನಿರಾಕರಿಸುತ್ತಿರುವುದು ನಿಷೇಧದ ಮತ್ತೊಂದು ಪ್ರಮುಖ ಕಾರಣವಾಗಿದೆ. “ಅಧಿಕೃತ ಪ್ರತಿನಿಧಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ, ದೇಶೀಯ ಸಂಪರ್ಕ ಕೇಂದ್ರ ಅಥವಾ ಪ್ರತಿನಿಧಿಯ ವಿವರ ನಮಗೆ ದೊರಕಲಿಲ್ಲ,” ಎಂದು ಎನ್‌ಟಿಎ ತಿಳಿಸಿದೆ.

ಟೆಲಿಗ್ರಾಮ್ ಕುರಿತು ಕಳೆದ ವರ್ಷವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಾದಗಳು ಸದ್ದು ಮಾಡಿದ್ದವು. ಆಗಸ್ಟ್ 2024ರಲ್ಲಿ ಫ್ರಾನ್ಸ್‌ನಲ್ಲಿ ಟೆಲಿಗ್ರಾಮ್ ಸಹ-ಸಂಸ್ಥಾಪಕ ಪಾವೆಲ್ ಡುರೊವ್ ಅವರನ್ನು ಮಕ್ಕಳ ಶೋಷಣಾ ವಿಷಯ ವಿತರಣೆ ಹಾಗೂ ಮಾದಕ ವಸ್ತು ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿತ್ತು. ನಂತರ ಫ್ರಾನ್ಸ್‌ನಿಂದ ಹೊರಹೋಗದಂತೆ ನಿರ್ಬಂಧ ವಿಧಿಸಿ, ನ್ಯಾಯಾಂಗ ಮೇಲ್ವಿಚಾರಣೆಯಲ್ಲಿಡಲಾಯಿತು.

ಮಾರ್ಚ್ 2025ರಲ್ಲಿ ತಾತ್ಕಾಲಿಕವಾಗಿ ಡುರೊವ್‌ಗೆ ದೇಶ ಬಿಟ್ಟು ಹೋಗಲು ಅವಕಾಶ ನೀಡಲಾಯಿತು.

ಬಳಕೆದಾರರ ಡೇಟಾ ರಕ್ಷಣೆ ಕುರಿತು ಸ್ಪಷ್ಟ ನೀತಿ ಇಲ್ಲದ ಕಾರಣ, ಟೆಲಿಗ್ರಾಮ್ ಹಲವು ದೇಶಗಳಲ್ಲಿ ಟೀಕೆಗೆ ಗುರಿಯಾಗಿದೆ. ಚೀನಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಅಪ್ಲಿಕೇಶನ್ ಈಗಾಗಲೇ ನಿರ್ಬಂಧಿತವಾಗಿದೆ.

Related posts