ಹಳ್ಳಿಗೆ ಜೀವಜಲ ಹರಿಸಿದ ‘ಭಗೀರಥ’; ಎಲ್ಲೆಲ್ಲೂ ChefTalk ‘ಪೂಜಾರಿ’ದ್ದೇ ಮಾತು

ಬಿರು ಬೇಸಿಗೆಯ ಬೇಗೆ. ಅತಿಯಾದ ಬಿಸಿಲ ಧಗೆ.. ಇದು ಕರಾವಳಿಯಲ್ಲಿ ಬೇಸಿಗೆ ಸಂದರ್ಭದಲ್ಲಿನ ಪರಿಸ್ಥಿತಿ.
ಲಾಕ್ಡೌನ್’ನಿಂದಾಗಿ ಕೆಲಸವಿಲ್ಲ, ಮಳೆ ಇನ್ನೂ ದೂರದಲ್ಲಿದ್ದು ಕುಡಿಯಲು ನೀರಿಲ್ಲ..

ಸುಮುದ್ರ ತೀರ ಪ್ರದೇಶ ಅಂದುಕೊಂಡರೂ ಬಹುತೇಕ ಕಡೆ ಕುಡಿಯುವ ನೀರಿಗೂ ಬವಣೆ. ಕರಾವಳಿಯ ಬಹುತೇಕ ಪ್ರದೇಶಗಳಲ್ಲಿ  ಸಾಮಾನ್ಯವೆಂಬಂತಿರುವ ದುಸ್ಥಿತಿ. ಇಂತಹಾ ಸಂಧಿಕಾಲದಲ್ಲಿ ಜನಪ್ರತಿನಿಧಿಗಳು ನೆರವಾಗದಿದ್ದರೂ ಭಗೀರಥ ಪ್ರಯತ್ನದಂತೆ ನೀರು ಹರಿಸಿದ್ದಾರೆ ಬೆಂಗಳೂರಿನ ಉದ್ಯಮಿ.

ಬೆಂಗಳೂರಿನಲ್ಲಿ ಲಕ್ಷಾಂತರ ಜನರ ಹಸಿವು ನೀಗಿಸುವ ಕೈಂಕರ್ಯದಲ್ಲಿ ತೊಡಗಿರುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಇದೀಗ ತನ್ನ ತವರು ಜಿಲ್ಲೆ ಉಡುಪಿ ಸಮೀಪದ ಊರುಗಳ ಜನರಿಗೆ ಜೀವಜಲ ಒದಗಿಸುವ ಯಜ್ಞದಲ್ಲಿ ತಲ್ಲೀನರಾಗಿದ್ದಾರೆ.
ಕುಂದಾಪುರ ಸಮೀಪದ ಬಿಜೂರು ಗ್ರಾಮ ಅರಬ್ಬೀ ಸಮುದ್ರಕ್ಕೆ ಸಮೀಪವಿದ್ದರೂ ಅಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಇದೆ. ಜೀವಜಲಕ್ಕಾಗಿ ಅಲ್ಲಿನ ಜನ ಪರದಾಡುತ್ತಿದ್ದಾರೆ. ಬೇಸಿಗೆ ಆರಂಭವಾದರಂತೂ ಹನಿ ನೀರಿಗೂ ಯದ್ಧ ನಡೆಸುವ ಸ್ಥಿತಿ ಎದುರಾಗುತ್ತದೆ.

ಸುಮಾರು ಎರಡು ತಿಂಗಳ ಹಿಂದೆ ಈ ಗ್ರಾಮಕ್ಕೆ ತೆರಳಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ ಗ್ರಾಮಸ್ಥರ ಸ್ಥಿತಿ ಕಂಡು ಮಮ್ಮಲ ಮರುಗಿದರು. ಇವರ ನೀರಿನ ದಾಹ ತಣಿಸಲೇಬೇಕೆಂದು ಸಂಕಲ್ಪ ಮಾಡಿದರು. ಅದಾಗಲೇ ಲಾಕ್‌ಡೌನ್‌ನಿಂದಾಗಿ ಹಲವು ಜಿಲ್ಲೆಗಳಲ್ಲಿ ಅಸಹಾಯಕಾರಾಗಿದ್ದ ಮಂದಿಗೆ ಉಚಿತ ಊಟೋಪಚಾರ ವ್ಯವಸ್ಥೆ ಕಲ್ಪಿಸಿದ್ದ ಗೋವಿಂದ ಬಾಬು ಪೂಜಾರಿಯವರು, ಕುಂದಾಪುರ ಸಮೀಪದ ಬಿಜೂರು ಗ್ರಾಮದ ಜನರ ಪಾಲಿಗೂ ಆಪತ್ಪಾಂಧವರಾದರು. ಬಡಜನರ ನೆರವಿಗಾಗಿ ಸ್ಥಾಪಿಸಿರುವ ತಮ್ಮ ಸಾರಥ್ಯದ ‘ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್’ನ ಹಿತೈಷಿಗಳನ್ನು ಸೇರಿಸಿ ಗ್ರಾಮಸ್ಥರಿಗೆ ನೀರು ಪೂರೈಕೆ ಮಾಡಿದರು.

ಬಾವಿ ಇದ್ದರೂ ನೀರಿಲ್ಲ; ಪರ್ಯಾಯ ವ್ಯವಸ್ಥೆ ಮಾಡಲು ಜನಪ್ರತಿನಿಧಿಗಳಿಗೂ ಆಸಕ್ತಿ ಇಲ್ಲ. ಗ್ರಾಮಸ್ಥರ ಈ ಅಸಾಹಾಯಕತೆಯನ್ನು ಅರಿತ ಗೋವಿಂದ ಬಾಬು ಪೂಜಾರಿ, ಸಮಸ್ಯೆ ಬಗೆಹರಿಸಲೆಂದೇ ಸ್ಥಳೀಯ ಯುವಕರ ಸೈನ್ಯ ಕಟ್ಟಿದರು. ತಮ್ಮದೇ ಖರ್ಚಿನಲ್ಲಿ ನೀರು ತರಿಸುವ ಪ್ರಯತ್ನಕ್ಕಿಳಿದರು. ಗರಡಿ, ನಿಸರ್ಗಕೇರಿ, ಕಳಿಸಾಲು ಸಹಿತ ಹಲವು ಕಡೆ ಜೀವಜಲ ಸಮಸ್ಯೆ ಎದುರಿಸುತ್ತಿರುವ ಪ್ರದೇಶಗಳಿಗೆ ಸಾಲು ಸಾಲು ಟ್ಯಾಂಕರ್’ಗಳಲ್ಲಿ ನೀರು ಸಾಗಿ ಬಂದವು. ಇದನ್ನು ಕಂಡ ಗ್ರಾಮಸ್ಥರು ಫಲ್ ಖುಷ್. ಗ್ರಾಮ ಪಂಚಾಯತ್ ಎರಡು ದಿನಗಳಿಗೊಮ್ಮೆ ಕೊಡುತ್ತಿದ್ದ ನೀರು ಒಂದು ದಿನದ ಬಳಕೆಗೂ ಸಾಕಾಗುತ್ತಿರಲಿಲ್ಲ. ಅದೇ ಗ್ರಾಮದಲ್ಲಿ ಗೋವಿಂದ ಬಾಬು ಪೂಜಾರಿಯವರು ನಿತ್ಯವೂ ಜಲಧಾರೆ ಹರಿಸಿ ಊರವರ ಪಾಲಿಗೆ ‘ಆಧುನಿಕ ಭಗೀರಥ’ ಎನಿಸಿಕೊಂಡರು.

ಪ್ರತೀ ಏರಿಯಾಗಳಲ್ಲಿ 60 ಕುಟುಂಬಗಳಿಗೆ ಒಂದು ಟ್ಯಾಂಕರ್’ನಂತೆ ನಿತ್ಯವೂ ನೀರು ಪೂರೈಕೆ ಮಾಡಲಾಗುತ್ತದೆ. ಗ್ರಾಮದ ಯುವಕರು ನೀರು ಪೂರೈಕೆ ಕಾಯಕದಲ್ಲಿ ಕೈ ಜೋಡಿಸಿದ್ದಾರಾದರೂ ವಾಹನ, ಡೀಸೆಲ್, ಚಾಲಕನ ವೇತನ ಸಹಿತ ನೀರು ಪೂರೈಕೆಯ ಎಲ್ಲಾ ಖರ್ಚನ್ನೂ ಗೋವಿಂದ ಬಾಬು ಪೂಜಾರಿಯವರೇ ಭರಿಸುತ್ತಿದ್ದಾರೆ.

ಯಾರು ಈ ‘ಆಧುನಿಕ ಭಗೀರಥ’..?

ಗೋವಿಂದ ಬಾಬು ಪೂಜಾರಿ ಮೂಲತಃ ಕುಂದಾಪುರದವರು. ಬಡ ಕುಟುಂಬದಲ್ಲಿ ಹುಟ್ಟಿದ ಇವರು ಬಾಲ್ಯದಲ್ಲೇ ಮುಂಬೈಗೆ ತೆರಲಿ‌ ಹೊಟೇಲ್ ಉದ್ಯಮಿಗಳ ಗರಡಿಯಲ್ಲಿ ಪಳಗಿ ತನ್ನದೇ ಸಂಸ್ಥೆ ಕಟ್ಟಿದವರು. ಮುಂಬೈ, ಥಾಣೆ, ಪುಣೆ, ಹೈದರಾಬಾದ್ ಸಹಿತ ದೇಶದ ವಿವಿಧೆಡೆ ತಮ್ಮ ಕ್ಯಾಟರಿಂಗ್ ಉದ್ಯಮ ವಿಸ್ತರಿಸಿದ ಇವರು ಬೆಂಗಳೂರಿನಲ್ಲೂ ChefTalk and Hospitality Services Pvt Ltd ಕಂಪೆನಿ ಸ್ಥಾಪಿಸಿ ಜನರ ಹಸಿವು ನೀಗಿಸುವ ಕಾಯಕಕ್ಕೆ ಮುನ್ನುಡಿ ಬರೆದವರು. ಬೆಂಗಳೂರು ಹಾಗೂ ಮುಂಬೈ ಮಹಾನಗರಗಳ ಬಹುತೇಕ ಹಾಸ್ಟೆಲ್’ಗಳಿಗೆ ಪೊಲೀಸ್ ಠಾಣೆಗಳಿಗೆ ನಿತ್ಯ ಉಚಿತ ಊಟ ಒದಗಿಸುತ್ತಿರುವ ಈ ಸಂಸ್ಥೆ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಮೂಲಕ ಲಕ್ಷಾಂತರ ಜನರಿಗೆ ಊಟ ಪೂರೈಸುತ್ತಿದೆ.

ಈ ಕಾರ್ಯದ ಜೊತೆಯಲ್ಲೇ ‘ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಿ ಸಮಾಜಿಕ ಕೈಂಕರ್ಯದಲ್ಲೂ ತೊಡಗಿದ್ದಾರೆ.

ಇದನ್ನೂ ಓದಿ.. ಅಸಹಾಯಕರಿಗೆ ನೆರವು; ಕರಾವಳಿ ಕಾಲೇಜು ಸೇನಾನಿಗಳ ಕೈಂಕರ್ಯ 

 

Related posts