ತಿರುವನಂತಪುರಂ: ಕೊರೋನಾ ವೈರಾಣು ತಲ್ಲಣದ ಸನ್ನಿವೇಶದ ಜೊತೆಯಲ್ಲೇ ಚೀನಾ ಭಾರತದ ಭೂಭಾಗ ಪ್ರವೇಶಕ್ಕೆ ಯತ್ನ ನಡೆಸುತ್ತಲೇ ಇದೆ. ಈ ಕಾರಣದಿಂದಾಗಿಯೇ ಲಡಾಖ್ ಬಳಿ, ಗಲ್ವಾನ್ ಕಣಿವೆಯಲ್ಲಿ ಸಮರಸನ್ನಿವೇಶ ಸೃಷ್ಟಿಯಾಗಿದೆ. ಇದರಿಂದ ಕುಪಿತರಾಗಿರುವ ಭಾರತೀಯರು ಚೀನೀ ವಸ್ತುಗಳ ಬಹಿಷ್ಕಾರದ ಅಭಿಯಾನವನ್ನೇ ಆರಂಭಿಸಿದ್ದಾರೆ.
ಈ ಅಭಿಯಾನ ಇದೀಗ ಕಮ್ಯುನಿಸ್ಟರ ನಾಡು ಕೇರಳದಲ್ಲಿ ಪ್ರತಿಧ್ವನಿಸಿದೆ. ನೆಹರೂ ನಾಮಕರಣ ಮಾಡಿರುವ ಗ್ರಾಮವೊಂದರ ಹೆಸರನ್ನು ಬದಲಿಸಬೇಕೆಂದು ಅಲ್ಲಿನ ಜನರು ಮುಂದಿಟ್ಟಿರುವ ಒತ್ತಾಯ ಈಗ ದೇಶವ್ಯಾಪಿ ಸದ್ದಾಗುತ್ತಿದೆ.
ಕೇರಳದ ಪತ್ತನಂತಿಟ್ಟ ಸಮೀಪ ಗ್ರಾಮವೊಂದಿದೆ. ಆ ಗ್ರಾಮಕ್ಕೆ ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರು ಅವರು ‘ಚೀನಾ ಮುಕ್ಕು’ ಎಂದು ಹೆಸರಿಸಿದ್ದರು. ಇದೀಗ ಚೀನಾ ವಿರುದ್ಧ ಅಭಿಯಾನ ನಡೆಯುತ್ತಿರುವಾಗ ನಮ್ಮ ಊರಿನ ಹೆಸರಿಗಿರುವ ಚೀನಾ ದೇಶದ ಸ್ಪರ್ಶವೂ ತೊಲಗಲಿ ಎಂಬ ಕೂಗು ಅಲ್ಲಿ ಎದ್ದಿದೆ. ತಮ್ಮೂರಿನ ಹೆಸರನ್ನು ಬದಲಾವಣೆ ಮಾಡಲು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಏನಿದು ಚೀನಾ ಮುಕ್ಕು?
ಚೀನಾ ಮುಕ್ಕು ಅಂದರೆ ಚೀನಾ ಜಂಕ್ಷನ್ ಎಂದರ್ಥ. 1952ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕಾಗಿ ಗ್ರಾಮಕ್ಕೆ ಪ್ರಧಾನಿ ಜವಾಹರ್ ಲಾಲ್ ನೆಹರು ಭೇಟಿ ನೀಡಿದ್ದರು. ಆ ಪ್ರದೇಶವು ಕಮ್ಯುನಿಸ್ಟ್ ನೆಲೆಯಾಗಿತ್ತು. ಆ ಪ್ರದೇಶ ತುಂಬೆಲ್ಲ ಕಮ್ಯುನಿಸ್ಟರ ಕೆಂಪು ಬಣ್ಣದ ಧ್ವಜಗಳೇ ರಾರಾಜಿಸುತ್ತಿದ್ದವು. ಇದನ್ನು ಕಂಡ ನೆಹರು ಚೀನಾದ ಪ್ರತಿಬಿಂಬ ಎಂದು ಬಣ್ಣಿಸಿದ್ದರಂತೆ. ಅಷ್ಟೇ ಅಲ್ಲ ಈ ಪ್ರದೇಶವನ್ನು ‘ಚೀನಾ ಮುಕ್ಕು’ ಎಂದು ಕರೆದಿದ್ದರಂತೆ. ನೆಹರು ಅವರೇ ಕರೆದ ‘ಚೀನಾ ಜಂಕ್ಷನ್’ ಹೆಸರು ಆ ಗ್ರಾಮಕ್ಕೆ ಶಾಶ್ವತವಾಯಿತು. ಆದರೆ ಚೀನಾ ರಗಳೆಯ ನಂತರ ಇದೀಗ ಆ ಗ್ರಾಮದ ಜನರಿಗೆ ಚೀನಾ ಜಂಕ್ಷನ್ ಹೆಸರಿನ ಬಗ್ಗೆ ಜನರಿಗೆ ಜಿಗುಪ್ಸೆ ಉಂಟಾಗಿದೆ. ಈ ಹೆಸರನ್ನು ಬದಲಾವಣೆ ಮಾಡುವಂತೆ ಪಟ್ಟು ಹಿಡಿದ್ದಾರೆ. ಇದಕ್ಕಾಗಿ ಗ್ರಾಮಪಂಚಾಯತ್ ಮಟ್ಟದಲ್ಲಿ ಪ್ರಯತ್ನ ನಡೆದಿದೆ.