ಕೊರೋನಾ ರೂಪಾಂತರ ; ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳಿಗೆ ಸೂಚನೆ.

ಬೆಳಗಾವಿ: ಬ್ರಿಟನ್ ದೇಶದಲ್ಲಿ ಕರೋನಾದ ರೂಪಾಂತರ ಹೊಂದಿದ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಹೆಚ್ಚು ಎಚ್ಚರಿಕೆಯಿಂದ ಇರುವಂತೆ ಜಲಸಂಪನ್ಮೂಲ ಸಚಿವ ಶ್ರೀ ರಮೇಶ್ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಕೋವಿಡ್ 19 ಸೋಂಕು‌ ನಿವಾರಕ ಲಸಿಕೆಯು ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ಲಸಿಕೆಯನ್ನು ಸಹಾ ವ್ಯವಸ್ಥಿತವಾಗಿ ಜನರಿಗೆ ತಲುಪಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ. ಅಲ್ಲಿಯವರೆಗೂ ಜನರು ಮೈಮರೆಯದೇ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲೇಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಕಳಕಳಿಯ ಸಾರ್ವಜನಿಕರಲ್ಲೂ ಮನವಿ ಮಾಡಿದ್ದಾರೆ.

ಮಾರುಕಟ್ಟೆಗಳಲ್ಲಿ ಸೋಂಕು ಹರಡುವಿಕೆ ತಡೆಗೆ ವ್ಯವಸ್ಥಿತ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು. ಮಳಿಗೆಗಳಲ್ಲಿ ಕಡ್ಡಾಯ 6 ಅಡಿ ಅಂತರ ಕಾಪಾಡಿಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಬೇಕು. ಪ್ರತಿದಿನ ಮಳಿಗೆಗಳನ್ನು ಸ್ಯಾನಿಟೈಸ್ ಮಾಡಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಚಿವ ರಮೇಶ್ ಜಾರಕಿಹೊಳಿ ನಿರ್ದೇಶನ ನೀಡಿದ್ದಾರೆ.

ಜನವರಿ 1ರಿಂದ ಶಾಲಾ ಕಾಲೇಜುಗಳು ಪ್ರಾರಂಭವಾಗಲಿದ್ದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಆರಂಭಕ್ಕೆ ಸರ್ಕಾರ ಸೂಚನೆ‌ ನೀಡಿದ್ದು, ಅದರಂತೆ ಜಿಲ್ಲೆಯ ಎಲ್ಲಾ ಶಾಲಾ‌ ಕಾಲೇಜುಗಳೂ ಸರ್ಕಾರದ ನಿರ್ದೇಶನದಂತೆ ಕೊಠಡಿಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸೋಂಕು ನಿವಾರಕ ಔಷಧಿಗಳನ್ನು ಸಿಂಪಡಿಸಿ ವಿದ್ಯಾರ್ಥಿಗಳ ಮತ್ತು ಪಾಲಕರಲ್ಲಿರುವ ಭಯ ಹೋಗಲಾಡಿಸಬೇಕು. ಇದಕ್ಕಾಗಿ ಪ್ರತಿ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಲು ತಂಡ ರಚಿಸುವಂತೆ ಬೆಳಗಾವಿ ಜಿಲ್ಲಾ ಶಿಕ್ಷಣಾಧಿಕಾರಿಗಳಿಗೆ ಅವರು ಆದೇಶಿಸಿದ್ದಾರೆ.

Related posts