3 ತಿಂಗಳು ಬ್ಯಾಂಕ್ ಸಾಲ ಮರುಪಾವತಿಸಬೇಕಿಲ್ಲ; ಆರ್.ಬಿ.ಐ ನಿರ್ಧಾರದಿಂದ ಜನ ನಿರಾಳ

ದೆಹಲಿ: ಮಹತ್ವದ ತೀರ್ಮಾನವೊಂದರಲ್ಲಿ ಕೇಂದ್ರ ಬ್ಯಾಂಕ್ ಸಾಲ ತೀರಿಸಲು ಪರದಾಡುತ್ತಿರುವ ಜನರ ನೆರವಿಗೆ ಧಾವಿಸಿದೆ. ಕೊರೋನಾ ಹಾವಳಿಯಿಂದಾಗಿ ದೇಶ ಸಮಸ್ಯೆಯ ಸುಳಿಯಲ್ಲಿ ಸಿಲುಕಿರುವ ಈ ಸಂದಿಗ್ಧ ಕಾಲದಲ್ಲಿ 3 ತಿಂಗಳ ಬ್ಯಾಂಕ್ ಸಾಲದ ಕಂತು ಪಾವತಿಯಿಂದ ಜನರಿಗೆ ವಿನಾಯಿತಿ ಘೋಷಿಸಿದೆ.

ಸಂಕಷ್ಟದಲ್ಲಿರುವ ಜನರಿಗಾಗಿ ಕೇಂದ್ರ ಸರ್ಕಾರ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಿದ ಬೆನ್ನಲೇ ಭಾರತೀಯ ರಿಸರ್ವ್ ಬ್ಯಾಂಕ್ ಕೂಡಾ ಪರ್ಯಾಯ ಸೂತ್ರ ಪ್ರಕಟಿಸಿದೆ. ಸಾಲ ಮರುಪಾವತಿಗೆ 3 ತಿಂಗಳ ವಿನಾಯಿತಿ ನೀಡಿದೆಯಾದರೂ ಇದು ಸಾಲ ಮನ್ನಾ ಅಲ್ಲ, ಮೂರು ತಿಂಗಳ ನಂತರ ಮರು ಪಾವತಿಸಲೇಬೇಕು.

ಆರ್​ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಕರೆದ ಸುದ್ದಿಗೋಷ್ಠಿ ಇಡೀ ದೇಶದ ಗಮನ ಕೇಂದ್ರೀಕರಿಸಿತ್ತು. ಮಾಧ್ಯಮಗಳೊಂದಿಗೆ ಮಾತನಾಡುತ್ತ ಹಲವು ನಿರ್ಧಾರಗಳನ್ನು ಪ್ರಕಟಿಸಿದ ಆರ್​ಬಿಐ ಗವರ್ನರ್, ರಿಪೋ ದರ 75 ಬೇಸಿಸ್ ಪಾಯಿಂಟ್ ಇಳಿಕೆಯಾಗಿದೆ. ರಿವರ್ಸ್ ರಿಪೋ ದರವನ್ನು 90 ಮೂಲಾಂಕಗಳಷ್ಟು ಇಳಿಕೆ ಮಾಡಲಾಗಿದೆ. ಶೆ. 5.5ರಷ್ಟಿದ್ದ ರಿವರ್ಸ್ ರಿಪೋ ಈಗ ಶೇ. 4.20ಕ್ಕೆ ಇಳಿದಿದೆ ಎಂದರು. ಸಿಆರ್​ಆರ್​ ದರ ಕೂಡಾ ಶೇ. 3ಕ್ಕೆ ನಿಗದಿಯಾಗಿದ್ದು, ಈ ಮೂಲಕ ದೇಶದ ಆರ್ಥಿಕತೆಗೆ 3.75 ಲಕ್ಷ ಕೋಟಿಯಷ್ಟು ಹಣದ ಹರಿವು ಆಗಲಿದೆ.

ಇದೆ ವೇಳೆ, ಪ್ರಸ್ತುತ ಜನಸಾಮಾನ್ಯರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದಾಗಿ ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗೆ ಸಾಲಗಳ ಕಂತುಗಳನ್ನ ಕಟ್ಟಲು ಗ್ರಾಹಕರಿಗೆ 3 ತಿಂಗಳ ವಿನಾಯಿತಿ ನೀಡುವಂತೆ ಆರ್ಬಿಐ ಸೂಚಿಸಿದೆ ಎಂದರು.

Related posts