ಲಾಕ್ ಡೌನ್ ಹಿನ್ನೆಲೆ; ಜನ ಸಂಕಷ್ಟ ನಿವಾರಣೆಗೆ ಸಂಸದ ತೇಜಸ್ವಿ ಸೂತ್ರ

ಬೆಂಗಳೂರು: ಮಾರಣಾಂತಿಕ ಕೊರೋನಾ ನಿಯಂತ್ರಣಕ್ಕೆ ಇಡೀ ದೇಶವೇ ಹರಸಾಹಸಪಡುತ್ತಿವೆ. ದೇಶಾದ್ಯಂತ ಮೂರು ವಾರಗಳ ಲಾಕ್ ಡೌನ್ ಘೋಷಣೆಯಾಗಿದ್ದು ಅಗತ್ಯ ವಸ್ತುಗಳಿಗಾಗಿ ಜನ ಪರದಾಡುವಂತಾಗಿದೆ.
ಈ ನಿಟ್ಟಿನಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೊಸ ಕ್ರಮಕ್ಕೆ ಮುಂದಾಗಿದ್ದಾರೆ.

21 ದಿನಗಳ ಕಾಲ ಲಾಕ್​ಡೌನ್​ಗೆ ಕರೆ ನೀಡಿದ್ದರೂ ಬೆಂಗಳೂರಿನಲ್ಲಿ ಜನಜಂಗುಳಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೊಸ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಸಹಾಯವಾಣಿ ತೆರೆಯಲಾಗಿದೆ. ತುರ್ತು ಸಂದರ್ಭಗಳಲ್ಲಿ ಈ ಸಹಾಯವಾಣಿ ಮೂಲಕ ಆರೋಗ್ಯ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಔಷಧಿ ತಲುಪಿಸುತ್ತೇವೆ. ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದೇವೆ. ನಮ್ಮ ಜೊತೆ ಬಿಜೆಪಿ ಕಾರ್ಯಕರ್ತರೂ ಕೈಜೋಡಿಸಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಮಾರ್ಕೆಟ್ ಶಿಫ್ಟ್?

ಇದೀಗ ಲಾಕ್ ಡೌನ್ ಜಾರಿಯಲ್ಲಿರುವುದರಿಂದಾಗಿ ಜನ ಸಾಮಾನ್ಯರು ಕಷ್ಟ ಅನುಭವಿಸುತ್ತಿದ್ದಾರೆ. ತರಕಾರಿ ಮಾರಾಟಗಾರರಿಗೂ ಅನಾನುಕೂಲವಾಗುತ್ತಿದೆ. ಈ ಬಗ್ಗೆ ಅನೇಕರು ಸಂಸದರ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಲಾಸಿಪಾಳ್ಯ ಹಾಗೂ ಕೆಆರ್ ಮಾರ್ಕೆಟ್’ಗೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಪರಿಸ್ಥಿತಿ ಅವಲೋಕಿಸಿದರು. ತರಕಾರಿ, ಹಣ್ಣುಗಳನ್ನು ಕೊಳ್ಳಲು ಕೆ.ಆರ್​. ಮಾರುಕಟ್ಟೆಗೆ ಜನರು ಮುಗಿಬೀಳುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಕ್ರಮಕ್ಕೆ ಸಂಸದರು ಮುಂದಾದರು. ತರಕಾರಿಗೆ ಚಂದ್ರಾ ಲೇಔಟ್, ವಿಜಯನಗರ, ಬಸವನಗುಡಿ ಕಡೆಯಿಂದ ಜನರು ಬರುತ್ತಿದ್ದಾರೆ. ಈ ಸಂಬಂಧ ಸಚಿವ ಆರ್. ಅಶೋಕ್ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆ ಚರ್ಚಿಸಿ ಮಾರ್ಕೆಟ್ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೆ.ಆರ್​. ಮಾರ್ಕೆಟ್​ನಲ್ಲಿರುವ ಅಂಗಡಿಗಳನ್ನು ಬಸವನಗುಡಿಯ ನ್ಯಾಷನಲ್ ಮೈದಾನ ಮತ್ತು ವಿಜಯನಗರದ ಮೈದಾನಕ್ಕೆ ಶಿಫ್ಟ್​ ಮಾಡುವ ಬಗ್ಗೆ ಮೇಯರ್ ಜೊತೆ ಚರ್ಚೆ ಮಾಡುತ್ತೇವೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

Related posts