ವಾಷಿಂಗ್ಟನ್: ಮಧ್ಯಪ್ರಾಚ್ಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರ ತನ್ನ ನಾಗರಿಕರಿಗೆ ತಕ್ಷಣ ಆ ಪ್ರದೇಶ ತೊರೆಯುವಂತೆ ತುರ್ತು ಸೂಚನೆ ನೀಡಿದೆ. “ಗಂಭೀರ ಸುರಕ್ಷತಾ ಅಪಾಯಗಳು ಎದುರಾಗುವ ಸಾಧ್ಯತೆ ಇದೆ” ಎಂದು ಎಚ್ಚರಿಕೆ ನೀಡಲಾಗಿದ್ದು, ಲಭ್ಯವಿರುವ ವಾಣಿಜ್ಯ ವಿಮಾನಗಳ ಮೂಲಕ ಕೂಡಲೇ ಹೊರಡಲು ಅಮೇರಿಕ ಅಧಿಕಾರಿಗಳು ಕರೆ ನೀಡಿದ್ದಾರೆ.
ಅಮೆರಿಕ ವಿದೇಶಾಂಗ ಕಾರ್ಯದರ್ಶಿ Marco Rubio ವೀಡಿಯೊ ಸಂದೇಶದಲ್ಲಿ, “ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕನ್ ನಾಗರಿಕರಿಗೆ – ನಿಮ್ಮ ಸುರಕ್ಷತೆ ಮತ್ತು ಭದ್ರತೆ ನಮ್ಮ ಮೊದಲ ಆದ್ಯತೆಯಾಗಿದೆ” ಎಂದು ತಿಳಿಸಿದ್ದಾರೆ. ಕಾನ್ಸುಲರ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೋರಾ ನಾಮ್ದಾರ್, ಗಂಭೀರ ಭದ್ರತಾ ಅಪಾಯಗಳ ಹಿನ್ನೆಲೆ ತಕ್ಷಣ ದೇಶ ತೊರೆಯುವಂತೆ ಒತ್ತಾಯಿಸಿದ್ದಾರೆ.
ಈ ಸಲಹೆ ವ್ಯಾಪ್ತಿಯಲ್ಲಿ ಬಹ್ರೇನ್, ಈಜಿಪ್ಟ್, ಇರಾನ್, ಇರಾಕ್, ಇಸ್ರೇಲ್, ವೆಸ್ಟ್ ಬ್ಯಾಂಕ್ ಮತ್ತು ಗಾಜಾ, ಜೋರ್ಡಾನ್, ಕುವೈತ್, ಲೆಬನಾನ್, ಓಮನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ಯೆಮೆನ್ ದೇಶಗಳು ಒಳಗೊಂಡಿವೆ. ನೆರವು ಅಗತ್ಯವಿರುವವರು ವಿದೇಶದಿಂದ +1-202-501-4444 ಮತ್ತು ಯುಎಸ್ ಹಾಗೂ ಕೆನಡಾದಿಂದ +1-888-407-4747 ಗೆ 24/7 ಸಂಪರ್ಕಿಸಲು ಸೂಚಿಸಲಾಗಿದೆ. ಹತ್ತಿರದ ರಾಯಭಾರ ಕಚೇರಿ ಅಥವಾ ದೂತಾವಾಸದಿಂದ ನವೀಕೃತ ಭದ್ರತಾ ಮಾಹಿತಿಗಾಗಿ Smart Traveler Enrollment Program (STEP) ನಲ್ಲಿ ನೋಂದಾಯಿಸಿಕೊಳ್ಳುವಂತೆ ತಿಳಿಸಲಾಗಿದೆ.
ವಾಷಿಂಗ್ಟನ್‌ನ ಕಾರ್ಯಾಚರಣೆ ಕೇಂದ್ರದಿಂದ 24/7 ಇಂಟರ್‌ಏಜೆನ್ಸಿ ಟಾಸ್ಕ್ ಫೋರ್ಸ್ ಸಕ್ರಿಯಗೊಂಡಿದ್ದು, ಕಾನ್ಸುಲರ್ ವ್ಯವಹಾರಗಳು, ನಾಗರಿಕ ಸುರಕ್ಷತೆ ಮತ್ತು ರಾಜತಾಂತ್ರಿಕ ಭದ್ರತೆಯ ತಜ್ಞರು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 110 ಕ್ಕೂ ಹೆಚ್ಚು ಇಂಟರ್‌ಏಜೆನ್ಸಿ ಪ್ರತಿನಿಧಿಗಳೊಂದಿಗೆ ದೈನಂದಿನ ಸಮನ್ವಯ ಸಭೆಗಳು ನಡೆಯುತ್ತಿವೆ. 30 ಕ್ಕೂ ಹೆಚ್ಚು STEP ಸಂದೇಶಗಳು ಹಾಗೂ 15 ಹೆಚ್ಚುವರಿ ಭದ್ರತಾ ಎಚ್ಚರಿಕೆಗಳನ್ನು ಹೊರಡಿಸಲಾಗಿದೆ. ವಿಶೇಷ ವಾಟ್ಸಾಪ್ ಚಾನೆಲ್ 15,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, 6.5 ಲಕ್ಷಕ್ಕೂ ಅಧಿಕ ಮಂದಿಗೆ ಮಾಹಿತಿ ತಲುಪಿಸಿದೆ.
ಅಮೆರಿಕ ಮತ್ತು ಇರಾನ್ ನಡುವಿನ ಹಗೆತನ ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಗಲ್ಫ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ವಲಸಿಗ ಸಮುದಾಯಗಳು ಹಾಗೂ ಪ್ರಮುಖ ಇಂಧನ ಮೂಲಸೌಕರ್ಯಗಳಿರುವುದರಿಂದ ಪರಿಸ್ಥಿತಿ ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.

