ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಆಗಸ್ಟ್ 7ರಂದು ಬಿಜೆಪಿ ರೈತ ಮೋರ್ಚಾ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮೋರ್ಚಾ ರಾಜ್ಯ ಅಧ್ಯಕ್ಷ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಆಡಳಿತ ರೂಢ ಕಾಂಗ್ರೆಸ್ ಸರ್ಕಾರವೂ ಬಿಜೆಪಿ ಸರ್ಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಕೈ ಬಿಟ್ಟಿದ್ದು, ರಾಜ್ಯದ ರೈತರ ವಿರುದ್ಧವಾಗಿ ನಡೆದುಕೊಂಡಿದೆ. ರೈತ ವಿರೋಧಿ ನೀತಿಯನ್ನು ಖಂಡಿಸಿ 07.08.2023 ರಂದು ವಿವಿಧ ಜಿಲ್ಲಾ ಬಿಜೆಪಿ ರೈತ ಮೋರ್ಚಾದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಪಿಎಂಸಿ ಕಾನೂನು: ಬಿಜೆಪಿ ಸರ್ಕಾರ ರೈತರು ತಾವು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ಎಪಿಎಂಸಿ ಕಾಯಿದೆಯ ಮುಖಾಂತರ ಕೊಟ್ಟಿತ್ತು. ಈ ಮುಖಾಂತರ ರೈತರಿಗೆ ಸಾಗಾಣಿಕೆ ವೆಚ್ಚ ದಲ್ಲಾಳಿಗಳ ಕಮಿಷನ್ ಮತ್ತು ಇತರ ಖರ್ಚುಗಳು ಉಳಿತಾಯವಾಗುತ್ತಿತ್ತು, ಕಾಂಗ್ರೆಸ್ ಸರ್ಕಾರವು ಎಪಿಎಂಸಿ ಕಾನೂನನ್ನು ರದ್ದುಮಾಡಿ ರೈತರ ಆದಾಯಕ್ಕೆ ತಂದಿದೆ ಎಂದು ಆಕ್ಷೇಪಿಸಿದ್ದಾರೆ.
ಅವೈಜ್ಞಾನಿಕ ವಿದ್ಯುತ್ ದರ ಏರಿಕೆ: ರೈತರು ಅವಲಂಬಿತವಾಗಿರುವ ಹತ್ತಿ ಉದ್ಯಮ, ರೈಸ್ ಮಿಲ್ ಮತ್ತು ಆಲೆಮನೆಗಳು ಈ ರೀತಿಯಾಗಿ ರೈತರು ಬಳಕೆ ಮಾಡುತ್ತಿದ್ದ ಅತಿ ಸಣ್ಣ ಮತ್ತು ಸಣ್ಣ, ಮಧ್ಯಮ ಕೈಗಾರಿಕೆಗಳಿಗೆ ಬಾರಿ ತೊಂದರೆ ಆಗಿದೆ. ವಿದ್ಯುತ್ ದರ ಏರಿಕೆ ಮಾಡಿ ರೈತರ ಖರ್ಚನ್ನು ಹೆಚ್ಚಾಗಿಸಿದೆ.
ರೈತ ವಿದ್ಯಾನಿಧಿ ಯೋಜನೆ: ರೈತರ ಮಕ್ಕಳು ವಿದ್ಯಾವಂತರಾಗಬೇಕು ಉನ್ನತ ಶಿಕ್ಷಣವನ್ನು ಪಡೆಯಬೇಕು ಎನ್ನುವ ಹಿತದೃಷ್ಟಿಯಿಂದ ರಾಜ್ಯದ 11 ಲಕ್ಷ ರೈತ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 438.69 ಕೋಟಿ ರೂಪಾಯಿಗಳ ರೈತ ವಿದ್ಯಾನಿಧಿಯನ್ನು ರದ್ಧು ಪಡಿಸುವ ಮೂಲಕ ಬಡ ರೈತರ ಮಕ್ಕಳಿಗೆ ಅನ್ಯಾಯವೆಸಗುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಗೊಂದು ಗೋಶಾಲೆ ಯೋಜನೆ : ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಿಸಲು ಪ್ರತಿ ಜಿಲ್ಲೆಗೊಂದು ಗೋ ಶಾಲೆಯನ್ನು ಸ್ಥಾಪಿಸಲು ಬಿಜೆಪಿ ಸರ್ಕಾರ ತೀರ್ಮಾನಿಸಿತ್ತು, ಅಂತಹ ಪೂಜ್ಯನೀಯ ಗೋಮಾತೆಯನ್ನು ಅಕ್ರಮವಾಗಿ ಗೋ ಸಾಗಣಿಕೆದಾರರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಿಂಪಡೆಯಲು ನಿರ್ಧರಿಸಿದೆ. ಇದು ಸರಿಯಲ್ಲ ಎಂದಿದ್ದಾರೆ.
ರಾಜ್ಯದ 50 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿದ ರೈತರಿಗೆ ಭೂ ಸಿರಿ ಎಂಬ ಯೋಜನೆಯಲ್ಲಿ 10 ಸಾವಿರ ಹೆಚ್ಚುವರಿ ಸಹಾಯಧನ ನೀಡುವ ಹಿಂದಿನ ಸರ್ಕಾರ ನಿರ್ಣಯವನ್ನು ರದ್ಧು ಪಡಿಸಲಾಗುತ್ತಿದೆ. ಕೇಂದ್ರ ಸರ್ಕಾರದ ಜೊತೆ ಬಿಜೆಪಿ ರಾಜ್ಯ ಸರ್ಕಾರ ಕೂಡ ಸುಮಾರು 51 ಲಕ್ಷ ರೈತರಿಗೆ ವಾರ್ಷಿಕ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ಕಿಸಾನ್ ಸಮ್ಮಾನ್ ನಿಧಿಯೋಜನೆ ಜಾರಿಗೆ ತಂದಿದ್ದನ್ನು ತಡೆ ಹಿಡಿಯುತ್ತಿದೆ ಎಂದಿದ್ದಾರೆ.
ಕೃಷಿ ಭೂಮಿ ಮಾರಾಟ ಕಾಯ್ದೆ: ಈ ಹಿಂದೆ ಕೃಷಿ ಭೂಮಿ ಕೊಳ್ಳುವವರು ಕೃಷಿಕರಾಗಿರಬೇಕು ಅಥವಾ ಕೃಷಿ ಕೂಲಿಕಾರನಾಗಿರಬೇಕು ಎಂಬ ನಿಯಮ ಇತ್ತು. ಹೀಗಾಗಿ ರೈತರ ಜಮೀನುಗಳಿಗೆ ಯೋಗ್ಯದರ ಸಿಗುತ್ತಿರಲಿಲ್ಲ ಇದಕೆ ಬಿಜೆಪಿ ಸರ್ಕಾರ ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ತರಲಾಯಿತು. ಈ ಕಾಯ್ದೆಯಲ್ಲಿ ಯಾರು ಬೇಕಾದರೂ ಕೃಷಿ ಭೂಮಿಯನ್ನು ಕೊಂಡುಕೊಳ್ಳಬಹುದು ಎಂಬ ನಿಯಮವನ್ನು ಜಾರಿ ಮಾಡಲಾಯಿತು. ಇದರಿಂದ ಕೃಷಿ ಜಮೀನುಗಳ ಮೌಲ್ಯ ಹೆಚ್ಚಾಗಿತ್ತು ಮತ್ತು ಇದರಿಂದ ಕೃಷಿ ಪದವೀಧರ ವಿದ್ಯಾರ್ಥಿಗಳು ಕೂಡ ಜಮೀನನ್ನು ಖರೀದಿಸುವ ಮೂಲಕ ಹೊಸ ತಂತ್ರಜ್ಞಾನ ಮತ್ತು ಕೃಷಿ ಕಾರ್ಯಕ್ಕೆ ಹೊಸ ಆಯಾಮ ನೀಡಬಹುದು ಎಂದು ಬಿಜೆಪಿ ಸರ್ಕಾರ ಈ ಕಾಯ್ದೆಯನ್ನು ತಂದಿತ್ತು. ಆದರೆ, ಸಿದ್ಧರಾಮಯ್ಯನವರ ಕಾಂಗ್ರೇಸ ಸರ್ಕಾರ ಕೃಷಿ ಭೂಮಿ ಮಾರಾಟ ಕಾಯ್ದೆಯನ್ನು ರದ್ಧುಗೊಳಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.
ನೀರಾವರಿ ಯೋಜನೆಗಳ ನಿರ್ಲಕ್ಷ್ಯ: ಬಿಜೆಪಿ ಸರ್ಕಾರದಲ್ಲಿ ನೀರಾವರಿ ಯೋಜನೆಗಳಿಗೆ 23 ಸಾವಿರ ಕೋಟಿ ಅನುದಾನ ಒದಗಿಸಿದ್ದು, ಅದನ್ನು ಈಗ 19 ಸಾವಿರ ಕೋಟಿಗೆ ಇಳಿಸಿ ರೈತರಿಗೆ ಅನ್ಯಾಯವೆಸಗಿದೆ. ಮೇಕೆದಾಟು ಯೋಜನೆಗೆ ಯಾವುದೇ ಬಜೆಟ್ ನಲ್ಲಿ ಯಾವುದೇ ಅನುದಾನ ನೀಡದೇ ಕಾಂಗ್ರೇಸ್ ಮಾಡಿದ ಪಾದಯಾತ್ರೆ ಕೇವಲ ರಾಜಕೀಯ ಸ್ಟಂಟ್ ಆಗಿದೆ ಎಂದು ಆರೋಪಿಸಿದ್ದಾರೆ.
ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್: ರಾಜ್ಯದ 24.67 ಲಕ್ಷ ಹಾಲು ಉತ್ಪಾದಕರಿಗೆ ಅನುಕೂಲವಾಗಲು ಸಾವಿರ ಕೋಟಿ ಅನುದಾನದಡಿ ಸ್ಥಾಪಿಸಿದ್ಧ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ರದ್ಧುಗೊಳಿಸಲು ನಿರ್ಧರಿಸಿದೆ. ಶ್ರಮ ಶಕ್ತಿ ಯೋಜನೆ ರದ್ದತಿಗೆ ಮುಂದಾಗಿದೆ. ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಡಿಬಿಟಿ ಮೂಲಕ ಮಾಸಿಕ ರೂ. 500 ಸಹಾಯ ಧನ ನೀಡುವ ಯೋಜನೆಯನ್ನು ಜಾರಿಗೆ ತಂದಿತ್ತು. ಅದನ್ನು ರದ್ದುಗೊಳಿಸಲು ನಿರ್ಣಯಿಸಿದೆ. ಜೀವನ್ ಜ್ಯೋತಿ ವಿಮಾ ಯೋಜನೆ : 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳ ರೈತರಿಗೆ 180 ಕೋಟಿ ರೂ ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಜಾರಿ ಮಾಡಲಾಗಿತ್ತು. ಅದನ್ನು ರದ್ದುಗೊಳಿಸಲಾಗಿದೆ. ಸಿರಿಧಾನ್ಯ ಸಂಸ್ಕರಿಸುವ ರೈತ ಉತ್ಪಾದಕ ಸಂಸ್ಥೆಗಳಿಗೆ ಪ್ರಾಸಸ್ತ್ಯವನ್ನು ನೀಡಲಾಗಿತ್ತು. ಆ ಯೋಜನೆಯನ್ನು ರದ್ದು ಮಾಡಿದ್ದಾರೆ. ರೈತ ಸಂಪದ ಯೋಜನೆ: ರೈತರು ಬೆಳೆದ ಬೆಳೆಗಳನ್ನು ಕೊಯ್ಲೋತ್ತರ ನಿರ್ವಹಣೆ ಮಾಡಲು ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜನಕ್ಕೆ ಬಿಜೆಪಿ ಸರ್ಕಾರ 100 ಕೋಟಿ ಹಣವನ್ನು ನೀಡಿತ್ತು ಈ ಯೋಜನೆಯನ್ನು ಕೈ ಬಿಡಲಾಗಿದೆ.ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆ: ಸಹಸ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆಯಡಿ 75 ಕೋಟಿ ಅನುದಾನ ನೀಡಿ ರೈತರ ಜಮೀನುಗಳಲ್ಲಿ ಜಲ ಹೊಂಡ ನಿರ್ಮಿಸುವ ಜಲ ನಿಧಿ ಯೋಜನೆ ಜಾರಿ ಮಾಡಲಾಗಿತ್ತು. ಆ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿದೆ.
ಮೀನುಗಾರರಿಗೆ ವಸತಿ ಸೌಲಭ್ಯ: ಹತ್ತು ಸಾವಿರ ಮೀನುಗಾರರಿಗೆ ವಸತಿ ಸೌಲಭ್ಯ ಕಲ್ಪಿಸುವ ಬಿಜೆಪಿ ಸರ್ಕಾರದ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೈ ಬಿಟ್ಟಿದೆ. ಕಲ್ಯಾಣ ಕರ್ನಾಟಕದ ಕೃಷಿ ಕ್ಲಸ್ಟರ್: ಯಾದಗಿರಿ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಸೀಗಡಿ ಕೃಷಿ ಕ್ಲಸ್ಟರ್ ಸ್ಥಾಪನೆಗೆ ಬಿಜೆಪಿ ಸರ್ಕಾರ ಅನುದಾನ ಒದಗಿಸಿತ್ತು. ಹಿಂದುಳಿದ ಕಲ್ಯಾಣ ಕರ್ನಾಟಕದ ಜನರ ಆದಾಯವನ್ನು ಹೆಚ್ಚಿಸಲು ಕೃಷಿ ಉಪವಲಯಗಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಈ ಯೋಜನೆಯನ್ನು ಕೈ ಬಿಟ್ಟು, ಕಲ್ಯಾಣ ಕರ್ನಾಟಕದ ಜನರ ಬಗ್ಗೆ ಇರುವ ಅಸಡ್ಡೆಯನ್ನು ತೋರಿಸಿದೆ ಎಂದವರು ಆರೋಪಿಸಿದ್ದಾರೆ.