ಅಲ್ಪಸಂಖ್ಯಾತ ಐಎಎಸ್‌ ಅಧಿಕಾರಿ ಮೇಲೆ ಬಿಜೆಪಿ ನಾಯಕರ ವಾಗ್ದಾಳಿ: ಶರಣ್‌ ಪ್ರಕಾಶ್‌ ಪಾಟೀಲ್‌ ಟೀಕೆ 

ಬೆಂಗಳೂರು: ಕಲಬುರಗಿಯ ಜಿಲ್ಲಾಧಿಕಾರಿಯನ್ನು ಪಾಕಿಸ್ತಾನದವರು ಎಂದು ಬಿಜೆಪಿಯ ವಿಧಾನಪರಿಷತ್ ಬಿಜೆಪಿ ಸದಸ್ಯ ಎನ್ ರವಿ ಕುಮಾರ್ ವಿರುದ್ಧ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್ ವಾಗ್ದಾಳಿ ನಡೆಸಿದರು.

ವಿಕಾಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಸಚಿವರು, ಬಿಜೆಪಿಯವರೆಗೆ ಬುದ್ದಿ ಭ್ರಮಣೆಯಾಗಿದೆ. ಐಎಎಸ್‌ ಅಧಿಕಾರಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ವಿಷಾದನೀಯ. ಶಾಲಾ ಮಕ್ಕಳು ಕೂಡ ಹೀಗೆ ಮಾತನಾಡಲ್ಲ. ಸಾರ್ವಜನಿಕ ಜೀವನದಲ್ಲಿ ಇರಲು ಇಂಥವರು ಅನರ್ಹ’ ಎಂದು ಕಿಡಿಕಾರಿದರು.

ಐಎಎಸ್‌ ಅಧಿಕಾರಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿರುವದನ್ನು ಐಎಎಸ್‌ ಅಧಿಕಾರಿಗಳ ಒಕ್ಕೂಟ ಈಗಾಗಲೇ ರವಿಕುಮಾರ್‌ ವಿರುದ್ಧ ಪತ್ರ ಬರೆದು, ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ವಿಧಾನ ಪರಿಷತ್‌ ನಾಯಕರೊಬ್ಬರು ಈ ರೀತಿ ಮಾತನಾಡಿದ್ದು ಅಪ್ರಬುದ್ಧತೆ ತೋರುತ್ತದೆ ಎಂದು ಸಚಿವರು ತಿಳಿಸಿದರು.

ಹೇಳಿಕೆ ನೀಡುವಾಗ ಸರಿ, ತಪ್ಪು ಎಂಬುದರ ಬಗ್ಗೆ ಜ್ಞಾನ ಕಳೆದುಕೊಂಡಿದ್ದಾರೆ. ಅಧಿಕಾರ ಕಳೆದುಕೊಂಡು ನೀರಿನಿಂದ‌ ಹೊರಬಿದ್ದ ಮೀನಿನಂತಾಗಿದ್ದಾರೆ ಎಂದು ಶರಣ್‌ ಪ್ರಕಾಶ್‌ ಪಾಟೀಲ್‌ ತಿಳಿಸಿದರು.

ಸ್ಯಾಂಡಲ್ ಸೋಪ್‌ ರಾಯಭಾರಿ ವಿಚಾರದಲ್ಲಿ ಸಮಾಜದಲ್ಲಿ ಒಡಕು ಸೃಷ್ಟಿಸಬೇಕು ಎಂಬುದು ಅವರ ಉದ್ದೇಶ. ಕರ್ನಾಟಕದ ಜನ ಪ್ರಬುದ್ಧರಿದ್ದಾರೆ.‌ ಅವರು ಮಾಡಿರುವ ಭ್ರಷ್ಟಾಚಾರಕ್ಕೆ ಶಿಕ್ಷೆ ಕೊಟ್ಟಿದ್ದಾರೆ. ಅದನ್ನು ಅರ್ಥ ಮಾಡಿಕೊಳ್ಳಲಿ ಎಂದು ಸಚಿವರು ಹೇಳಿದರು

Related posts