“ಕಾಂಗ್ರೆಸ್ ರಾಜಕೀಯ ತೀರಾ ಕೆಳಮಟ್ಟಕ್ಕೆ ಇಳಿದಿದೆ” – ಪ್ರಧಾನಿ ತಾಯಿಯ ‘ನಿಂದನೆ’ಗೆ ಶಾ, ನಡ್ಡಾ ಕಿಡಿ

ನವದೆಹಲಿ: ಬಿಹಾರದಲ್ಲಿ ನಡೆದ ರ‍್ಯಾಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದಿವಂಗತ ತಾಯಿಯ ವಿರುದ್ಧ ಅವಾಚ್ಯ ಶಬ್ದ ಬಳಕೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ನಾಯಕರ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುರುವಾರ ಎಕ್ಸ್‌ನಲ್ಲಿ ಬಿಡುಗಡೆ ಮಾಡಿದ ವೀಡಿಯೋ ಸಂದೇಶದಲ್ಲಿ, “ಪ್ರಧಾನಿ ಮೋದಿ ಅವರ ತಾಯಿಯ ವಿರುದ್ಧ ಆರ್‌ಜೆಡಿ–ಕಾಂಗ್ರೆಸ್ ಜಂಟಿ ವೇದಿಕೆಯಿಂದ ನಿಂದನೆ ನಡೆಯಿರುವುದು ಖಂಡನೀಯ. ರಾಹುಲ್ ಗಾಂಧಿ ಹಾಗೂ ತೇಜಸ್ವಿ ಯಾದವ್ ಕ್ಷಮೆಯಾಚಿಸಲೇಬೇಕು” ಎಂದು ಆಗ್ರಹಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ತೀವ್ರ ಕಿಡಿಕಾರಿದ್ದು, “ಕಾಂಗ್ರೆಸ್ ರಾಜಕೀಯ ಅಸಭ್ಯತೆಯ ಎಲ್ಲಾ ಮಿತಿಗಳನ್ನು ದಾಟಿದೆ. ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕಾಂಗ್ರೆಸ್ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಬಡ ತಾಯಿಯ ಮಗ ಪ್ರಧಾನಿಯಾಗಿ ದೇಶವನ್ನು 11 ವರ್ಷಗಳಿಂದ ಮುನ್ನಡೆಸುತ್ತಿರುವುದನ್ನು ಕಾಂಗ್ರೆಸ್ ಸಹಿಸಲಾರದು” ಎಂದು ಆರೋಪಿಸಿದರು.

“ಬಿಹಾರದ ದರ್ಭಂಗಾದಲ್ಲಿ ಪ್ರಧಾನಿಯವರ ತಾಯಿಯ ವಿರುದ್ಧ ಬಳಕೆಯಾದ ಅಸಭ್ಯ ಭಾಷೆ ನಮ್ಮ ಪ್ರಜಾಪ್ರಭುತ್ವದ ಮೇಲಿನ ಕಳಂಕವಾಗಿದೆ” ಎಂದು ಶಾ ಹೇಳಿದರು.

ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಸಹ ಮಹಾಘಟಬಂಧನ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ, “ಈ ಯಾತ್ರೆ ಅವಮಾನ, ದ್ವೇಷ ಮತ್ತು ಅಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿ ಹೋಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಘಟನೆಗೆ ಸಂಬಂಧಿಸಿ ಬಿಜೆಪಿ ನಿಯೋಗವೊಂದು ಬಿಹಾರದಲ್ಲಿ ಪೊಲೀಸರಿಗೆ ದೂರು ನೀಡಿದ್ದು, ಪ್ರಧಾನಿಯವರ ತಾಯಿಯನ್ನು ಗುರಿಯಾಗಿಸಿ ನಿಂದನೆ ಮಾಡಿದ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿದೆ ಎಂದು ತಿಳಿಸಲಾಗಿದೆ.

Related posts