ಕಾಂಗ್ರೆಸ್ ಸೇರುವ ಮೂಲಕ ಹೊಸ ರಾಜಕೀಯ ಮನ್ವಂತರ; ಪೂರ್ಣಿಮಾ ಶ್ರೀನಿವಾಸ್: 

ಬೆಂಗಳೂರು: ಕಾಂಗ್ರೆಸ್ ಸೇರುವ ಮೂಲಕ ಹೊಸ ರಾಜಕೀಯ ಮನ್ವಂತರ ಆರಂಭವಾಗಿದೆ ಎಂದು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾದ ಸಂದರ್ಭದಲ್ಲಿ ಮಾತನಾಡಿದ ಅವರು, ನಮ್ಮ ಕುಟುಂಬವನ್ನು ಎ.ಕೃಷ್ಣಪ್ಪ ಅವರ ಕುಟುಂಬ ಎಂದು ಗುರುತಿಸುತ್ತಾರೆ. ನನ್ನನ್ನು ಕಾಂಗ್ರೆಸ್ ಕೃಷ್ಣಪ್ಪ ಅವರ ಮಗಳು ಎಂದು ಗುರುತಿಸುತ್ತಾರೆ. ಎಲ್ಲರ ಅಪೇಕ್ಷೆ ಮೇರೆಗೆ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ ಎಂದರು.

ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೀರಿ. ನಮ್ಮ ಸೇರ್ಪಡೆಯಿಂದ ಪಕ್ಷಕ್ಕೂ ಅನುಕೂಲವಾಗಬೇಕು. ನಮ್ಮದೇ ರೀತಿಯಲ್ಲಿ ಅನೇಕ ಹಿಂದುಳಿದ ವರ್ಗದ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ಸಿಗುವಂತಾಗಬೇಕು. ಆಗ ಪಕ್ಷಕೂಡ ಬಲಿಷ್ಠವಾಗುತ್ತದೆ. ಇದಕ್ಕೆ ನಿಮ್ಮ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ ಅವರು, ನಾನು ಸಿದ್ಧಾಂತ ಒಪ್ಪಿ ಇಂದು ಕಾಂಗ್ರೆಸ್ ಸೇರಿದ್ದೇನೆ. ಅನೇಕರು ನನಗೆ ನಿನ್ನಲ್ಲಿ ಇನ್ನು ಕಾಂಗ್ರೆಸ್ ರಕ್ತವಿದೆ ಎಂದು ಹೇಳುತ್ತಿದ್ದರು. ಅದೇ ನನ್ನನ್ನು ಇಂದು ಮತ್ತೆ ಕಾಂಗ್ರೆಸ್ ಪಕ್ಷದತ್ತ ಕರೆತಂದಿದೆ. ನಾವು ಎಲ್ಲಿ ಕೆಲಸ ಮಾಡುತ್ತೇವೋ ಅಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ನಮ್ಮ ತಂದೆ ನನಗೆ ಹೇಳಿಕೊಟ್ಟಿದ್ದಾರೆ. ಅವರು ನನಗೆ ದೇವರಾಜ ಅರಸು, ಕೆ.ಹೆಚ್ ಪಾಟೀಲ್ ನಸೀರ್, ಸಿದ್ದರಾಮಯ್ಯ ಅವರ ವಿಚಾರಗಳನ್ನು ಹೇಳುತ್ತಿದ್ದರು. ಅದನ್ನು ನಾನು ಕೇಳಿ ಬೆಳದವಳು. ಅದರಿಂದ ಪ್ರೇರಿತಳಾಗಿ ನಾನು ರಾಜಕೀಯದತ್ತ ಮುಖ ಮಾಡಿದ್ದೇನೆ. ನಾನು ಮತ್ತೆ ಕಾಂಗ್ರೆಸ್ ನಿಂದ ಮತ್ತೊಂದು ಪಯಣ ಆರಂಭಿಸುತ್ತಿದ್ದು, ಈ ಪಯಣದಿಂದ ಎಲ್ಲರಿಗೂ ಶುಭವಾಗಲಿ. ನಮ್ಮ ಮೇಲೆ ವಿಶ್ವಾಸವಿಟ್ಟು ಇಲ್ಲಿಗೆ ಬಂದಿರುವ ಎಲ್ಲರಿಗೂ ಧನ್ಯವಾದಗಳು ಎಂದರು.

ಇದೇ ವೇಳೆಮಾತನಾಡಿದ ಡಿ.ಟಿ.ಶ್ರೀನಿವಾಸ್, ನಾವು ಇಂದು ಪಕ್ಷಕ್ಕೆ ಮರಳಿದ್ದೇವೆ. ನಮ್ಮದು ದೊಡ್ಡ ಬೇಡಿಕೆಗಳಿಲ್ಲ. ಸರ್ಕಾರ ನಮ್ಮೊಂದಿಗೆ ಇದೆ. ಹಟ್ಟಿಗಳಲ್ಲಿ ವಾಸ ಮಾಡುವ ನನ್ನ ಸಮಾಜವನ್ನು ಎಸ್ಟಿ ವಿಭಾಗಕ್ಕೆ ಸೇರಿಸಲು ಕೇಂದ್ರಕ್ಕೆ ಮೊದಲು ಪ್ರಸ್ತಾವನೆ ರವಾನಿಸಿದವರು ಇಲ್ಲಿ ಕೂತಿದ್ದಾರೆ. ಕುಲಶಾಸ್ತ್ರೀಯ ಅಧ್ಯಯನ ಆಗಿ ಕೇಂದ್ರದಲ್ಲಿ ಈ ಪ್ರಸ್ತಾವನೆ ಇದೆ. ನಾನು ಇದನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಇದು ರಾಜ್ಯದ ವ್ಯಾಪ್ತಿ ಮೀರಿ ಕೇಂದ್ರದ ಬಳಿ ಇದೆ. ಇತ್ತೀಚೆಗೆ ಅನೇಕ ಸಮಾಜಗಳ ಕುಲಶಾಸ್ತ್ರೀಯ ಅಧ್ಯಯನವಾಗಿ ಕೇಂದ್ರಕ್ಕೆ ರವಾನೆಯಾಗುತ್ತಿದೆ ಎಂದರು.

ಕನಿಷ್ಠ ಜೀವನ ನಡೆಸುತ್ತಿರುವ ಪ್ರವರ್ಗ 1ರಲ್ಲಿ ಅಲೆಮಾರಿ ಜೀವನ ನಡೆಸುತ್ತಿರುವ 46 ಸಮುದಾಯಗಳು ಗೊಲ್ಲ, ದೊಂಬಿದಾಸ, ಶಿಳ್ಳಕ್ಯಾತ, ಜೋಗಿ ಸಮಾಜಗಳ ಸಂಘಟನೆ ಮಾಡಿಕೊಂಡು ರಾಜ್ಯವನ್ನು ಸುತ್ತಿದ್ದೇನೆ. ನಮ್ಮನ್ನು ಅನೇಕರು ಟೀಕೆ ಮಾಡುತ್ತಾರೆ. ಸಮಾಜದ ಒಂದು ಭಾಗದ ಕುಲಶಾಸ್ತ್ರಿಯ ಅಧ್ಯಯನ ಕೇಂದ್ರವನ್ನು ಸೇರಿದೆ. ಮತ್ತೊಂದು ಭಾಗ ಹಂದಿಗೊಲ್ಲರು, ಹಾವಾಡಿಗಗೊಲ್ಲ, ಕೊಲಿ ಬಸವ ಸಮುದಾಯಗಳ ಪ್ರಸ್ತಾವನೆ ಕೇಂದ್ರಕ್ಕೆ ಹೋಗಬೇಕಿದೆ ಎಂದ ಅವರು, ಈ ಸಮುದಾಯದ ಜನರಿಗೆ ನೆಲ ಕಲ್ಪಿಸಲು ನಾನು ಪೂರ್ಣಿಮಾ ಬಹಳ ಶ್ರಮಿಸಿದ್ದೇವೆ. 2008ರಿಂದಲೂ ಇದಕ್ಕಾಗಿ ಸರ್ಕಸ್ ಮಾಡುತ್ತಲೇ ಇದ್ದೇವೆ. ಇದಕ್ಕಾಗಿ ಬಹಳ ನೋವಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕುಲಶಾಸ್ತ್ರ ಅಧ್ಯಯನಕ್ಕೆ 2 ಕೋಟಿ ನಿಗದಿ ಮಾಡಿಸಿದ್ದು, ಇದನ್ನು 5 ಕೋಟಿಗೆ ಹೆಚ್ಚಿಸಿ ಭಾಕಿ ಉಳಿದಿರುವ ಎಲ್ಲಾ ಸಮಾಜಗಳ ಕುಲಶಾಸ್ತ್ರ ಅಧ್ಯಯನ ಮಾಡಿ ಅದನ್ನು ಕೇಂದ್ರಕ್ಕೆ ಪ್ರಸ್ತಾವನೆಗೆ ಕಳುಹಿಸಬೇಕು ಎಂದು ಮನವಿ ಮಾಡುತ್ತೇನೆ. ಪ್ರವರ್ಗ 1 ಹಿಂದುಳಿದ ವರ್ಗಗಳಲ್ಲಿ ರಾಜಕೀಯ ಪ್ರಾತಿನಿಧ್ಯಕ್ಕಾಗಿ ಪೈಪೋಟಿ ನಡೆಸುವಾಗ ಎಂಬಿಸಿಗಳನ್ನು ಪ್ರತ್ಯೇಕವಾಗಿಟ್ಟು ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡುತ್ತೇನೆ ಎಂದರು.

ಕಾಡುಗೊಲ್ಲರನ್ನು ಕೇಂದ್ರ ಸರ್ಕಾರ ಒಬಿಸಿಯಲ್ಲಿ ಸೇರಿಸುವ ಬದಲು ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿ ಸೇರಿಸಿದೆ. ಅದು ಖಂಡನೀಯ. ಇತ್ತೀಚೆಗೆ ಸರ್ಕಾರ ಕುಂಚಿಟಿಗ ಸಮುದಾಯವನ್ನು ಒಬಿಸಿ ವರ್ಗಕ್ಕೆ ಸೇರಿಸಲು ಪ್ರಸ್ತಾವನೆ ಸಲ್ಲಿಸಿದ್ದು, ಅದೇ ರೀತಿ ಕಾಡುಗೊಲ್ಲರನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದರು.

Related posts