ರಾಜ್ಯದಲ್ಲಿ ಮುಂದುವರಿದ ಸಾವಿನ ಸರಣಿ; ಕೊರೋನಾಗೆ ಮತ್ತೊಬ್ಬ ಬಲಿ

ಬೆಂಗಳೂರು: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೋವಿಡ್-19 ವೈರಾಣು ಇದೀಗ ಕರ್ನಾಟಕದಲ್ಲೂ ಸಾವಿನ ಸರಣಿಯನ್ನು ಮುಂದುವರಿಸಿದೆ. ಕಲಬುರ್ಗಿಯಲ್ಲಿ ಮತ್ತೊಬ್ಬರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ಕೋವಿಡ್ 19 ಸೋಂಕಿಗೆ ಸೋಮವಾರ ಬೆಳಿಗ್ಗೆ 80 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆಂದು ಜಿಲ್ಲಾ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.  ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ವೃದ್ಧನಿಗೆ ಕೊರೋನಾ ವೈರಸ್ ಸೋಂಕು ತಗುಲಿದ್ದು ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಮೂಲಕ ಕಲಬುರ್ಗಿ ಜಿಲ್ಲೆಯೊಂದರಲ್ಲೇ  ಮೃತಪಟ್ಟವರ ಸಂಖ್ಯೆ ‌ನಾಲ್ಕಕ್ಕೇರಿದಂತಾಗಿದೆ. ರಾಜ್ಯದಲ್ಲಿ ಈ ಸಂಖ್ಯೆ ಈಗ 17.

ದೇಶದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡು ಆತಂಕದ ಪರಿಸ್ಥಿತಿ ಉಲ್ಬಣಗೊಂಡ ಸಂದರ್ಭದಲ್ಲಿ ಇತ್ತ ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದ್ದೇ ಕಲಬುರ್ಗಿ ಜಿಲ್ಲೆಯಲ್ಲಿ. ಇದೀಗ ಮತ್ತೊಬ್ಬರು ಅದೇ ಜಿಲ್ಲೆಯಲ್ಲಿ ಅದೇ ವೈರಾಣು ಸೋಂಕಿಗೆ ಬಲಿಯಾಗಿದ್ದಾರೆ.

  • ಮಾ.9ರಂದು 76 ವರ್ಷದ ವ್ಯಕ್ತಿ ಮೊದಲ ಬಲಿ
  • ಏ.7ರಂದು 65 ವರ್ಷದ ಹಣ್ಣಿನ ವ್ಯಾಪಾರಿ ಸಾವು
  • ಏ.13ರಂದು 55 ವರ್ಷದ ಬಟ್ಟೆ ವ್ಯಾಪಾರಿ ವಿಧಿವಶ
  • ಏ.21ರಂದು 80 ವರ್ಷದ ವೃದ್ಧ ನಿಧನ 

ಸೋಮವಾರ ಮೃತಪಟ್ಟವರು ಕಳೆದ ಮೂರು ವರ್ಷಗಳಿಂದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು.  ಜ್ವರ ‌ಕಾರಣಕ್ಕಾಗಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಪರೀಕ್ಷೆಗೆ ಗುರಿಪಡಿಸಿದಾಗ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ.. ಪಾದರಾಯನಪುರ ಘಟನೆ; ಇನ್ನಷ್ಟು ಗಲಭೆಕೋರರು ಇನ್ನೂ ಭೂಗತ?

Related posts