‘ಕೋಗಿಲು’ ತೆರವು; ಮಾನವೀಯ ದೃಷ್ಟಿಯಿಂದ ಪರ್ಯಾಯ ವಸತಿ ವ್ಯವಸ್ಥೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಕಟ್ಟಡ ನೆಲಸಮ ಕಾರ್ಯಾಚರಣೆ ಕುರಿತಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿರುವ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಇದನ್ನು ಕೇರಳದ ಚುನಾವಣಾ ರಾಜಕೀಯದ ಭಾಗವೆಂದು ವ್ಯಾಖ್ಯಾನಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಕೇರಳದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಕಾರಣ, ಅಲ್ಲಿನ ಮುಖ್ಯಮಂತ್ರಿ ಈ ವಿಚಾರವನ್ನು ರಾಜಕೀಯವಾಗಿ ಬಳಸುತ್ತಿದ್ದಾರೆ. ಅದಕ್ಕಾಗಿಯೇ ಅವರು ಕೋಗಿಲು ಪ್ರದೇಶಕ್ಕೆ ಒಬ್ಬ ಶಾಸಕ ಮತ್ತು ರಾಜ್ಯಸಭಾ ಸದಸ್ಯರನ್ನು ಕಳುಹಿಸಿದ್ದಾರೆ” ಎಂದು ಹೇಳಿದರು.

ಕೋಗಿಲು ಪ್ರದೇಶದ ನಿವಾಸಿಗಳು ನಿರಾಶ್ರಿತರಾಗಿದ್ದು, ಅವರು ಸರ್ಕಾರಿ ಭೂಮಿಯಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು. ನಿಗಮದ ವತಿಯಿಂದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. “ಮಾನವೀಯ ದೃಷ್ಟಿಯಿಂದ ನಾವು ಅವರಿಗೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ” ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ಆದರೆ, ಈ ವಿಷಯವನ್ನು ಅನಾವಶ್ಯಕವಾಗಿ ರಾಜಕೀಯಗೊಳಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅವರು, “ಯಾರಿಗೂ ಅಕ್ರಮವಾಗಿ ಮನೆಗಳನ್ನು ನಿರ್ಮಿಸಲು ಸರ್ಕಾರ ಅವಕಾಶ ನೀಡುವುದಿಲ್ಲ” ಎಂದು ಖಡಕ್ ಸಂದೇಶ ನೀಡಿದರು.

ಕಾನೂನು ಮತ್ತು ಮಾನವೀಯತೆಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಸರ್ಕಾರದ ನಿಲುವಾಗಿದ್ದು, ಅಕ್ರಮ ನಿರ್ಮಾಣಗಳ ವಿರುದ್ಧ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಸಿದ್ದರಾಮಯ್ಯ ಹೇಳಿದರು.

Related posts