ಕ್ಯೂಆರ್ ಕೋಡ್ ಕೂಪನ್ ಅವಾಂತರ; ಬಿಜೆಪಿಯಿಂದ ಮತದಾರರ ಗೌಪ್ಯ ಮಾಹಿತಿ ಕಳವು? ಏನಿದು ಕಾಂಗ್ರೆಸ್ ಆರೋಪ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು ಪರ ಮತದಾರರಿಗೆ ಆಮಿಷ ಒಡ್ಡಲು ಕ್ಯೂಆರ್ ಕೋಡ್ ಕೂಪನ್ ವಿತರಣೆ ಆರೋಪದ ಹಿನ್ನೆಲೆಯಲ್ಲಿ, ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಕುರಿತು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಿ.ಲಕ್ಷ್ಮೀಪತಿ ಈ ಕುರಿತಂತೆ ಗಂಭೀರ ಆರೋಪ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ಕ್ಯೂಆರ್ ಕೋಡ್ ಕೂಪನ್ ವಿತರಿಸಲು ಬಿಜೆಪಿ ಅಭ್ಯರ್ಥಿ ಅನುಮತಿ ಪಡೆದಿಲ್ಲ, ಬಿಜೆಪಿ ಕಾರ್ಯಕರ್ತರೆನ್ನಲಾದ ಹೊರ ಜಿಲ್ಲೆಯ ಮೂರು ಮಂದಿ ಮತದಾರರಿಗೆ ಆಮಿಷ ಒಡ್ಡಲು ಕ್ಯೂಆರ್ ಕೋಡ್ ಕೂಪನ್ ವಿತರಣೆ ಮಾಡುತ್ತಿರುವ ಅನುಮಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಗುರುವಾರ ಮಧ್ಯಾಹ್ನ ಹಿಡಿದು ಚುನಾವಣೆ ಅಧಿಕಾರಿಗಳಿಗೆ ಒಪ್ಪಿಸಲಾಯಿತು. ಆದರೆ ಸಂಜೆ ನಾಲ್ಕು ಗಂಟೆ ಆದರೂ ಕ್ರಮ ಜರುಗಿಸಿರಲಿಲ್ಲ. ಸೂಕ್ತ ಸೆಕ್ಷನ್ ಅಡಿಯಲ್ಲಿ ಎಫ್ ಐ ಆರ್ ದಾಖಲಿಸುವಲ್ಲಿ ಪೊಲೀಸರು ಕರ್ತವ್ಯಲೋಪವೆಸಗಿದ್ದಾರೆ ಎಂದು ಈ ನಾಯಕರು ಆರೋಪಿಸಿದ್ದಾರೆ.

ಗಂಭೀರ ಹಾಗೂ ಆತಂಕಕಾರಿ ಪ್ರಕರಣದಲ್ಲಿ ಬಿಜೆಪಿ ಅಭ್ಯರ್ಥಿ ಧೀರಜ್ ಮುನಿರಾಜು, ಕುರುಬರಹಳ್ಳಿ ನಿವಾಸಿ ಮಹೇಶ್, ಕಾಸರಗೋಡಿನ ಗೋಸಾಡ ಗ್ರಾಮದ ಮಹೇಶ್ ಹಾಗೂ ಕಾಸರಗೋಡಿನ ಮಂಗಲವಾಡಿ ಗ್ರಾಮದ ಕಿಶೋರ್ ಕುಮಾರ್ ವಿರುದ್ಧ ಸ್ಟೇಷನ್ ಬೇಲ್ ನೀಡಬಹುದಾದ ಸಾಮಾನ್ಯ ಪ್ರಕರಣ ದಾಖಲಾಗಿದೆ. ಅಲ್ಲದೆ ಮತ್ತೆ 08ಮಂದಿ ವಶಕ್ಕೆ ನೀಡಿದ್ದರು, ಆಲಪನಹಳ್ಳಿಯಲ್ಲಿ ಎರಡು ಬಸ್ಸುಗಳಲ್ಲಿ ಅನುಮತಿ ಇಲ್ಲದೆ ಪ್ರಚಾರಕ್ಕೆ ಬಳಸಿದ್ದು ಅದನ್ನು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ನೀಡಿದ್ದರು ಅವರ ವಿರುದ್ಧ ಕೈಗೊಂಡ ಕ್ರಮದ ಕುರಿತು ಪೊಲೀಸರು ಮಾಹಿತಿ ನೀಡಿಲ್ಲ ಎಂದವರು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿ ನಡೆಸಿರುವ ಧೀರಜ್ ಮುನಿರಾಜು ಅವರೇ ಹೇಳುವಂತೆ ಪ್ರಚಾರಕ್ಕೆಂದು ವಾಹನಕ್ಕೆ ಅನುಮತಿ ಪಡೆದಿಲ್ಲ ಎಂದಿದ್ದಾರೆ. ಅದು ತಪ್ಪಲ್ಲವೆ. ಸಿಕ್ಕಿಬಿದ್ದ ಯುವಕರು ಧೀರಜ್ ಪರವಾಗಿ ಬಂದಿದ್ದೇವೆ ಎಂದಿದ್ದಾರೆ ಇದು ನೀತಿಸಂಹಿತೆ ಉಲ್ಲಂಘನೆ ಅಲ್ಲವೇ..? ಎಂದು ಪ್ರಶ್ನಿಸಿದರು.

ಬಿಜೆಪಿ ಅಭ್ಯರ್ಥಿಗೆ ಸ್ಥಳೀಯ ಕಾರ್ಯಕರ್ತರ ಮೇಲೆ ನಂಬಿಕೆ ಇಲ್ಲವಾಗಿದೆ. ಆ ಕಾರಣವೇ ಹೊರ ಜಿಲ್ಲೆಯವರ ಕರೆಸಿ ಕೂಪನ್ ಹಂಚುತ್ತಿದ್ದಾರೆ. ಪಾರದರ್ಶಕವಾಗಿದ್ದರೆ ಸ್ಥಳೀಯರ ಮೂಲಕ ವಿತರಣೆ ಮಾಡುತ್ತಿದ್ದರು. ಈ ಬೆಳವಣಿಗೆಯೇ ಹೆಚ್ಚು ಅನುಮಾನಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ನಾಯಕ ದೂರಿದ್ದಾರೆ.

ಹೊಸಹಳ್ಳಿಯಲ್ಲಿ ದೊರಕಿರುವ QR ಕೋಡ್ ಉಳ್ಳ ಕಾರ್ಡ್ ನೋಡಿದಾಗ ಹಲವು ಪ್ರಶ್ನೆಗಳು ಮೂಡುತ್ತಿವೆ. ಆ ಕಾರ್ಡ್ ನಲ್ಲಿರುವ ಮತದಾರರ ಮಾಹಿತಿ ಎಲ್ಲಿಂದ ಬಂತು, ಆ ಕಾರ್ಡ್ ನಲ್ಲಿರುವ ಮಾಹಿತಿ ಇಂಗ್ಲಿಷ್ ಬಾಷೆಯಲ್ಲಿದ್ದು, ಸದ್ಯ ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ ದೊಡ್ಡಬಳ್ಳಾಪುರದ ಎಲೆಕ್ಟ್ರಾಲ್ ರೋಲ್ ಕನ್ನಡ ಭಾಷೆಯಲ್ಲಿದ್ದು, ಅದು PDF ( printable format) ಫಾರ್ಮ್ಯಾಟ್ ನಲ್ಲಿ ಮಾತ್ರ ಲಭ್ಯವಿದೆ, ಅದರಿಂದ ಮಾಹಿತಿಯನ್ನು ಕಾಪಿ ಮಾಡಿ ಪೇಸ್ಟ್ ಮಾಡಲು ಸಾಧ್ಯವಿಲ್ಲ, QR ಕೋಡ್ ಕಾರ್ಡ್ ನಲ್ಲಿ ಇಂಗ್ಲಿಷ್ ನಲ್ಲಿರುವ ಮತದಾರರ ಮಾಹಿತಿ ಚುನಾವಣಾ ಆಯೋಗದ ಅಧಿಕೃತ ವೆಬ್ ಸೈಟ್ ನಲ್ಲಿ ಸರ್ಚ್ ಮಾಡಿದಾಗ ಬರುವ ಮಾಹಿತಿ ಪಕ್ಕಾ ಒಂದಕ್ಕೊಂದು ತಾಳೆಯಾಗುತ್ತದೆ. ಕಾರ್ಡ್ನ್ ನಲ್ಲಿ ಮತದಾರರ ಮಾಹಿತಿ ಇಂಗ್ಲಿಷ್ ನಲ್ಲಿ ಮುದ್ರಿಸಲು ಕಾರಣವೇನು? ಗ್ರಾಮೀಣ ಭಾಗದವರಿಗೆ ಆ ಮಾಹಿತಿ ಅರ್ಥವಾಗುತ್ತದೆಯೇ? ಮೊಬೈಲ್ ಸಾಫ್ಟ್ವೇರ್ ನಲ್ಲಿ ಮತದಾರನ ಹೆಸರಿನ ಮೇಲೆ, ಎಪಿಕ್ ನಂಬರ್ ಮೇಲೆ ಸರ್ಚ್ (ಹುಡುಕಲು) ಮಾಡಲು ಅವಕಾಶ ಇದೆ, ಅಂದರೆ ಈ ಮೊಬೈಲ್ ಸಾಫ್ಟ್ವೇರ್ ಗೆ ಮತದಾರರ ಮಾಹಿತಿ ಎಲ್ಲಿಂದ ಬರುತ್ತಿದೆ ಎಂದು ಲಕ್ಮೀಪತಿ ಪ್ರಶ್ನಿಸಿದ್ದಾರೆ.

ಕ್ಷೇತ್ರದ ಎಲ್ಲಾ ಮತದಾರರ ಮಾಹಿತಿ ಹಾಗೂ ಮೊಬೈಲ್ ನಂಬರ್ ಅವರ ಬಳಿ ಇದೆ ಎಂದರ್ಥವಲ್ಲವೇ..? ಇಷ್ಟು ಮಾಹಿತಿಯನ್ನು ಹೊಂದಿರುವ ನೀವು, ಎಪಿಕ್ ನಂಬರ್ ನೊಂದಿಗೆ ಲಿಂಕ್ ಮಾಡಿರುವ ನಮ್ಮ ಆಧಾರ್ ಮಾಹಿತಿ ಹಾಗೂ ಇತರೆ ಡೆಮೋಗ್ರಾಫಿಕ್ ಮಾಹಿತಿ ಅವರ ಬಳಿ ಇಲ್ಲ ಎನ್ನಲು ಸಾಧ್ಯವೆ. ಆಧುನಿಕ ತಂತ್ರಜ್ಞಾನ ಬಳಸುವ ನಿಟ್ಟಿನಲ್ಲಿ ಚುನಾವಣೆ ಆಯೋಗದ ಮತದಾರ ಡೇಟಾ ಸಂಪೂರ್ಣ ಅವರ ಬಳಿ ಸೇರಿದೆ. ತಾಲೂಕಿನ ಮತದಾರರ ಗೌಪ್ಯ ಮಾಹಿತಿ ಹೇಗೆ ಸಿಕ್ತು..? ಮತದಾರರ ಖಾಸಗಿ ಮಾಹಿತಿ ಕದ್ದಿರುವ ಶಂಕೆ ಹೆಚ್ಚಾಗಿದ್ದು, ಚುನಾವಣೆ ಇಲಾಖೆಯ ಅಧಿಕಾರಿಗಳು ಕ್ರಮಕೈಗೊಳ್ಳಬೇಕಿದೆ ಎಂದವರು ಹೇಳಿದ್ದಾರೆ.

ಇವಿಎಂ ಮಿಷನ್ ಹ್ಯಾಕ್ ಮಾಡುವ ಹುನ್ನಾರ: ಚುನಾವಣೆ ಇಲಾಖೆಯ ಅಧಿಕಾರಿಗಳು ದೊಡ್ಡಮಟ್ಟದಲ್ಲಿ ಶಾಮೀಲಾಗಿ ಈ ಕೃತ್ಯ ನಡೆಸಲಾಗಿದೆ ಎಂಬ ಅನುಮಾನ ವ್ಯಾಪಕವಾಗಿದ್ದು ಅಮೂಲಾಗ್ರ ತನಿಖೆಯಾಗಿಬೇಕಿದೆ. ಇದು ಕೇವಲ ದೊಡ್ಡಬಳ್ಳಾಪುರಕ್ಕೆ ಸೀಮಿತವಾ.? ರಾಜ್ಯ ಪೂರ್ತಿ ಇದೆಯಾ. ಇದರಿಂದ ಇವಿಎಂ ಮಿಷನ್ ಹ್ಯಾಕ್ ಮಾಡುವ ಹುನ್ನಾರವೇ ಎಂದು ಲಕ್ಷ್ಮೀಪತಿ ಕಳವಳ ವ್ಯಕ್ತಪಡಿಸಿದರು.

ಕೂಪನ್ ಕೊಡಲು ಬಂದ ಯುವಕರ ಮೊಬೈಲ್‌‌ನಲ್ಲಿದ್ದ ಆಪ್ ಮೂಲಕ ಸ್ಕ್ಯಾನ್ ಮಾಡಿದರೆ ಗೀವನ್, ನಾಟ್ ಗೀವನ್ ಎಂದು ತೋರಿಸುತ್ತಿದೆ. ಇದು ಏನನ್ನು ತೋರಿಸುತ್ತಿದೆ. ಏನ್ ಕೊಟ್ಟಿದೆ. ಕೊಟ್ಟಿಲ್ಲ ಎನ್ನುತ್ತಿದೆ ಇದಕ್ಕೆ ಹೊಣೆಯಾರು..? ಇದೊಂದು ದೊಡ್ಡಮಟ್ಟದ ಚಿಲುಮೆ ಕಂಪನಿಯ ಅವಾಂತರವಾಗಿದ್ದು ದೊಡ್ಡಬಳ್ಳಾಪುರ ತಾಲೂಕಿನ ಮತದಾರರ ಗೌಪ್ಯ ಮಾಹಿತಿ ಕದ್ದಿರುವ ಆತಂಕಕ್ಕೆ ಹೆಚ್ಚಿಸಿದೆ ಎಂದವರು ಹೇಳಿದ್ದಾರೆ.

ಈ ಕುರಿತು ಜಿಲ್ಲಾ ಚುನಾವಣಾಧಿಕಾರಿಯ ಗಮನಕ್ಕೆ ತರಲಾಗಿದ್ದು, ಲಿಖಿತ ರೂಪದಲ್ಲಿ ಜಿಲ್ಲಾಚುನಾವಣಾಧಿಕಾರಿ, ರಾಜ್ಯ ಚುನಾವಣಾ ಆಯೋಗಕ್ಕೆ ದೂರನ್ನು ನೀಡಲಾಗುತ್ತಿದ್ದು, ಅಭ್ಯರ್ಥಿಯನ್ನು ಅನೂರ್ಜಿತಗೊಳಿಸಲು ಒತ್ತಾಯಿಸಲಾಗುವುದು ಎಂದರು.

ಕಾಂಗ್ರೆಸ್ ಪಕ್ಷಕ್ಕೆ 130ವರ್ಷಗಳ ಇತಿಹಾಸ: ಅಮೇರಿಕಾ ತಂತ್ರಜ್ಞಾನ ಬಳಸಿ ದೊಡ್ಡಬಳ್ಳಾಪುರ ತಾಲೂಕಿನ ಅಮಾಯಕ ಮತದಾರರ ಗೌಪ್ಯ ಮಾಹಿತಿ ಕದ್ದಿರುವ 1980ರಲ್ಲಿ ಹುಟ್ಟಿರುವ ಬಿಜೆಪಿ ಪಕ್ಷ, 130 ವರ್ಷದ ಇತಿಹಾಸ ಉಳ್ಳ ಕಾಂಗ್ರೆಸ್ ಪಕ್ಷದ ಕುರಿತು ತಂತ್ರಜ್ಞಾನ ಗೊತ್ತಿಲ್ಲ, ಜ್ಞಾನವಿಲ್ಲ ಎಂಬುದು ಹಾಸ್ಯಾಸ್ಪದ. ಇಂತಹ ಕ್ರಿಮಿನಲ್ ಮನಸ್ಥಿತಿ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ಕೆ.ಪಿ.ಜಗನಾಥ್, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ಅಪ್ಪಿವೆಂಕಟೇಶ್, ಕಾರ್ಯಾಧ್ಯಕ್ಷ ಆಂಜನಮೂರ್ತಿ, ಹೇಮಂತರಾಜ್, ರಾಜಘಟ್ಟರವಿ, ಕಾಂತರಾಜು, ಹರೀಶ್ ಕುಮಾರ್, ಜವಾಜಿ ರಾಜೇಶ್, ನ್ಯಾಯವಾದಿಗಳಾದ ಬೈರೇಗೌಡ, ಪ್ರಭಾಕರ್, ಟಿ.ಜಿ. ಶಿವಕುಮಾರ್ ಮತ್ತಿತರರಿದ್ದರು.

Related posts