ಗ್ಯಾರಂಟಿ’ ಯೋಜನೆಗಳನ್ನು ಕದ್ದು ಮೋದಿ ಚುನಾವಣೆ ಎದುರಿಸುತ್ತಿದ್ದಾರೆ: ಕಾಂಗ್ರೆಸ್ ಆರೋಪ

ಬೆಂಗಳೂರು: ಪ್ರಧಾನಿ ಮೋದಿಯವರು ಕಾಂಗ್ರೆಸ್‌ ಪಕ್ಷದ ಗ್ಯಾರಂಟಿ ಯೋಜನೆಗಳನ್ನು ಕದ್ದು ಪಂಚರಾಜ್ಯಗಳ ಚುನಾವಣೆ ಎದುರಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಲೇವಡಿ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಸಭಾಂಗಣದಲ್ಲಿ ನಡೆದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಜನ್ಮದಿನಾಚರಣೆ ಮತ್ತು ಬೆಂಗಳೂರು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ- ದಳಕ್ಕೆ ಮತ ಹಾಕಿದರೆ ಅವರು ಗ್ಯಾರಂಟಿ ಯೋಜನೆಗಳನ್ನು ವಾಪಸ್‌ ತೆಗದುಕೊಳ್ಳುವಂತಹ ಕಾನೂನು ತರುತ್ತಾರೆ. ಈ ವಿಚಾರಗಳನ್ನು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ನಾಯಕರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.

ಬಿಜೆಪಿ ಮತ್ತು ದಳದವರು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿದವರು. ಅವರ ಈ ಜನವಿರೋಧಿ ಬುದ್ದಿಯನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲುಸುವುದಾಗಲಿ, ಕಡಿಮೆ ಮಾಡುವುದಾಗಲಿ ಯಾವುದನ್ನೂ ಸಹ ಕಾಂಗ್ರೆಸ್‌ ಸರ್ಕಾರ ಮಾಡುವುದಿಲ್ಲ ಎಂದರು.

ಬಿಜೆಪಿಯವರು ಅಧ್ಯಕ್ಷರನ್ನಾಗಿ, ವಿರೋಧ ಪಕ್ಷದ ನಾಯಕರನ್ನಾಗಿ ಯಾರನ್ನಾದರೂ ಮಾಡಿಕೊಳ್ಳಲಿ. ಎಷ್ಟು ಜನರನ್ನು ಬೇಕಾದರೂ ಒಗ್ಗೂಡಿಸಲಿ. ಅದಕ್ಕೆ ತಲೆ ಕೆಡಿಸಿಕೊಳ್ಳಬೇಡಿ. ನಮಗೂ ಅದಕ್ಕೂ ಸಂಬಂಧವಿಲ್ಲ ಎಂದರು.

ಬ್ಲಾಕ್‌, ಜಿಲ್ಲಾ ತಾಲ್ಲೂಕು ಮಟ್ಟದ ಅಧ್ಯಕ್ಷರು, ಕಾರ್ಯಕರ್ತರು ಮತ್ತು ನಾಯಕರು ಬೂತ್‌ ಮಟ್ಟದಿಂದ ಗ್ಯಾರಂಟಿ ಯೋಜನೆಗಳ ಸಾಧಕ- ಭಾದಕಗಳನ್ನು ಕಡ್ಡಾಯವಾಗಿ ತಿಳಿದುಕೊಂಡು, ಜನರಿಗೆ ಆಗುತ್ತಿರುವ ಅನಾನುಕೂಲ ಮತ್ತು ಅನುಕೂಲ ಎರಡನ್ನೂ ಸರ್ಕಾರದ ಗಮನಕ್ಕೆ ತರಬೇಕು ಎಂದವರು ಹೇಳಿದರು.

ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಇಲ್ಲವೇ ಎಂದು ಖುದ್ದಾಗಿ ತಿಳಿಯಲು ಮಂತ್ರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಕೆಶಿ ತಿಳಿಸಿದರು.

ನ. 28 ರಂದು ಕಾಂಗ್ರೆಸ್‌ ಸಂಸ್ಥಾಪಕರ ದಿನ. ಈ ದಿನದಂದೇ ಪಕ್ಷದ ವತಿಯಿಂದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದೆಯೇ ಎಂದು ಸಮೀಕ್ಷೆ ಮಾಡಲು ಸಮಿತಿ ರಚನೆ ಮಾಡಲಾಗುವುದು ಎಂದರು.

ಮುಂದಿನ ನಾಲ್ಕು ವರ್ಷಗಳಲ್ಲಿ ಯಾರು ಇರುತ್ತಾರೆ ಎನ್ನುವುದೇ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಪ್ರತಿ ಕುಟುಂಬವೂ ತಿಂಗಳಿಗೆ 5 ಸಾವಿರಕ್ಕೂ ಹೆಚ್ಚು ಹಣವನ್ನು ಉಳಿತಾಯ ಮಾಡುತ್ತಿದೆ. ಇಂತಹ ಚಿನ್ನದ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಜನರಿಗೆ ಕಾರ್ಯಕರ್ತರು ಮನವರಿಕೆ ಮಾಡಬೇಕು ಎಂದರು.

ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೋದ ವೇಳೆ ಅವರು ʼಡಿ.ಕೆ ಈ ವರ್ಷ ಎರಡು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತನ್ನಿ, ಸಾಕು ಎಂದಿದ್ದರುʼ. ನಾನು ಆಯಿತು ಸಾರ್‌ ಎಂದು ನಕ್ಕು ಹೊರಬಂದಿದ್ದೆ. ಆದರೆ ಮೊದಲನೇ ಕ್ಯಾಬಿನೆಟ್‌ ಸಭೆಯಲ್ಲೇ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಡಿಸೆಂಬರ್‌ ತಿಂಗಳಿನಲ್ಲಿ ಐದನೇ ಗ್ಯಾರಂಟಿ ಯುವನಿಧಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.

Related posts