ಜಾತಿ ಜನಗಣತಿಗೆ ದೇಶವ್ಯಾಪಿ ಅಭಿಯಾನ: AICCಯಿಂದ ‘ಬೆಂಗಳೂರು ಘೋಷಣೆ’

ಬೆಂಗಳೂರು: ಜಾತಿ ಆಧಾರಿತ ಸಮೀಕ್ಷೆಗೆ ಒತ್ತಾಸೆಯೊಂದಿಗೆ, ದೇಶವ್ಯಾಪಿ ಅಭಿಯಾನ ನಡೆಸುವ ನಿರ್ಧಾರವನ್ನು ಎಐಸಿಸಿ ಹಿಂದುಳಿದ ವರ್ಗಗಳ ಸಲಹಾ ಮಂಡಳಿ ತೆಗೆದುಕೊಂಡಿದ್ದು, ಈ ನಿರ್ಧಾರವನ್ನು “ಬೆಂಗಳೂರು ಘೋಷಣೆ” ಎಂಬ ಹೆಸರಿನಲ್ಲಿ ಪ್ರಕಟಿಸಲಾಗಿದೆ.

ಬುಧವಾರ ಬೆಂಗಳೂರಿನಲ್ಲಿ ನಡೆದ ಎಐಸಿಸಿ ಓಬಿಸಿ ಸಮಿತಿಯ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಾಹಿತಿ ನೀಡಿ, “ತೆಲಂಗಾಣದ ಜಾತಿ ಸಮೀಕ್ಷೆಯನ್ನು ಮಾದರಿಯಾಗಿ ತೆಗೆದುಕೊಂಡು, ರಾಷ್ಟ್ರಮಟ್ಟದಲ್ಲಿ ಜಾತಿ ಜನಗಣತಿ ನಡೆಸಬೇಕು ಎಂಬ ಒತ್ತಾಯವಿದೆ” ಎಂದು ಹೇಳಿದರು.

ಹಿಂದುಳಿದ ವರ್ಗಗಳ ಸಲಹಾ ಸಮಿತಿಯ ಎರಡು ದಿನಗಳ ಸಭೆಗಳಲ್ಲಿ ಸಿದ್ದರಾಮಯ್ಯ ಅವರು ಮಂಡಿಸಿದ ನಿರ್ಣಯಗಳು ಸರ್ವಾನುಮತದಿಂದ ಅಂಗೀಕಾರಗೊಂಡವು. ಈ ಸಭೆಯಲ್ಲಿ ಭಾರತ್ ಜೋಡೋ ಸಂಚಾಲನೆಗೆ ಉತ್ಸಾಹದ ನುಡಿಗಳು ವ್ಯಕ್ತವಾಯಿತು.

“ನ್ಯಾಯಯೋಧ” ರಾಹುಲ್ ಗಾಂಧಿ ಅವರು ಸಮಾಜದ ಅಂಚಿನಲ್ಲಿರುವ ಜನರಿಗೆ ಸಾಮಾಜಿಕ ನ್ಯಾಯ ಒದಗಿಸಲು ಮಾಡಿದ ಧೈರ್ಯಶಾಲಿ ಹೋರಾಟಕ್ಕೆ ಎಐಸಿಸಿ ಓಬಿಸಿ ವಿಭಾಗ ಕೃತಜ್ಞತೆ ಸಲ್ಲಿಸಿದೆ. “ಮೋದಿ ನೇತೃತ್ವದ ಸರ್ಕಾರ ಜಾತಿ ಜನಗಣತಿಗೆ ಶರಣಾಗಿರುವುದು ರಾಹುಲ್ ಗಾಂಧಿಯ ಹೋರಾಟದ ಫಲವಾಗಿದೆ,” ಎಂದು ಸಿದ್ದರಾಮಯ್ಯ ಅವರು ಹೇಳಿದರು.

‘ಬೆಂಗಳೂರು ಘೋಷಣೆ’ ಪ್ರಮುಖ ಅಂಶಗಳು:
ರಾಷ್ಟ್ರೀಯ ಜಾತಿ ಜನಗಣತಿ ನಡೆಸಬೇಕೆಂಬ ಒತ್ತಾಯ.
ತೆಲಂಗಾಣದ ‘SEEEP CASTE SURVEY’ ಮಾದರಿಯನ್ನು ದೇಶದಾದ್ಯಂತ ಅನುಸರಿಸಬೇಕು.
ಮೀಸಲಾತಿ ಮಿತಿಗೆ ಮರುಪರಿಶೀಲನೆ: ಪ್ರಸ್ತುತವಿರುವ 50% ಮೀಸಲಾತಿ ಮಿತಿಯನ್ನು ತೆಗೆದುಹಾಕಿ, ಓಬಿಸಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿ ನೀಡಬೇಕು.
ಸಂವಿಧಾನದ 15(5)ನೇ ವಿಧಿ ಅನ್ವಯ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಜಾರಿಗೆ ತರಬೇಕು.

ಅಖಿಲ ಭಾರತ ಓಬಿಸಿ ವಿಭಾಗದ ನಾಯಕ ಅನಿಲ್ ಜೈ ಹಿಂದ್ ಅವರು ಮಾತನಾಡುತ್ತಾ, “ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲದಿಂದ ಜಾತಿ ಗಣತಿಗೆ ಒತ್ತಾಯಿಸಿ ದೇಶದಾದ್ಯಂತ ಓಬಿಸಿ ನಾಯಕರ ಸಭೆಗಳನ್ನು ಆಯೋಜಿಸುತ್ತಿದ್ದು, ಕರ್ನಾಟಕದ ಸಭೆ ಯಶಸ್ವಿಯಾಗಿ ನೆರವೇರಿತು” ಎಂದರು.

ಅವರು ಇನ್ನೂ ಮುಂದಾಗಿ, “ಜಾತಿ ಆಧಾರಿತ ಸಮೀಕ್ಷೆ ಮಾತ್ರ ನಿಜವಾದ ಸಾಮಾಜಿಕ ನ್ಯಾಯಕ್ಕೆ ದಾರಿ ಒದಗಿಸಬಲ್ಲದು. ಈ ಅಭಿಯಾನವು ಎಲ್ಲಾ ರಾಜ್ಯಗಳಲ್ಲಿ ವ್ಯಾಪಕವಾದ ಚರ್ಚೆ ಹಾಗೂ ಜಾಗೃತಿಗೆ ಕಾರಣವಾಗಲಿದೆ” ಎಂದು ಹೇಳಿದರು.

Related posts