‘ಜೇನು ಕ್ರಾಂತಿ’: ವಿಶ್ವದ ಎರಡನೇ ಅತಿದೊಡ್ಡ ಜೇನು ರಫ್ತುದಾರ ರಾಷ್ಟ್ರವಾಗಿ ಭಾರತ

ನವದೆಹಲಿ: ಭಾರತವು ಜೇನು ಉತ್ಪಾದನೆ ಮತ್ತು ರಫ್ತು ಕ್ಷೇತ್ರದಲ್ಲಿ ಮಹತ್ವದ ಮೆಟ್ಟಿಲೇರಿದೆ. 2023–24ರ ಹಣಕಾಸು ವರ್ಷದಲ್ಲಿ ಸುಮಾರು 1.07 ಲಕ್ಷ ಮೆಟ್ರಿಕ್ ಟನ್ ನೈಸರ್ಗಿಕ ಜೇನುತುಪ್ಪವನ್ನು ವಿದೇಶಗಳಿಗೆ ಸಾಗಿಸುವ ಮೂಲಕ ಭಾರತವು ಜಾಗತಿಕವಾಗಿ ಎರಡನೇ ಅತಿದೊಡ್ಡ ಜೇನು ರಫ್ತುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ. 2020ರಲ್ಲಿ 9ನೇ ಸ್ಥಾನದಲ್ಲಿದ್ದ ಭಾರತವು ಕೇವಲ ನಾಲ್ಕು ವರ್ಷಗಳಲ್ಲಿ ಏಳು ಸ್ಥಾನಗಳ ಏರಿಕೆ ಕಂಡಿದೆ ಎಂದು ಸರ್ಕಾರದ ಅಧಿಕೃತ ಹೇಳಿಕೆ ಭಾನುವಾರ ತಿಳಿಸಿದೆ.

ರಾಷ್ಟ್ರೀಯ ಜೇನುಸಾಕಣೆ ಮತ್ತು ಜೇನು ಮಿಷನ್‌ (NBHM) ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ವೈಜ್ಞಾನಿಕ ಜೇನುಸಾಕಣೆ, ಗುಣಮಟ್ಟದ ಜೇನುತುಪ್ಪ ಮತ್ತು ಇತರ ಜೇನುಗೂಡು ಉತ್ಪನ್ನಗಳ ಉತ್ಪಾದನೆಗೆ ಉತ್ತೇಜನ ನೀಡುತ್ತಿದೆ. ಈ ಯೋಜನೆ ರಾಷ್ಟ್ರೀಯ ಜೇನುಸಾಕಣೆ ಮಂಡಳಿ (NBB) ಮೂಲಕ ಜಾರಿಗೆ ತರಲಾಗುತ್ತಿದ್ದು, ‘ಆತ್ಮನಿರ್ಭರ ಭಾರತ’ ಅಭಿಯಾನದ ಭಾಗವಾಗಿ 2020–21 ರಿಂದ 2022–23ರ ವರೆಗೆ ₹500 ಕೋಟಿ ಬಜೆಟ್‌ನೊಂದಿಗೆ ಆರಂಭಿಸಲಾಯಿತು. ನಂತರ ಈ ಯೋಜನೆಯನ್ನು 2025–26ರ ವರೆಗೆ ವಿಸ್ತರಿಸಲಾಗಿದ್ದು, ₹370 ಕೋಟಿಯ ಉಳಿದ ಬಜೆಟ್‌ನಿಂದ ಮುಂದುವರಿಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಜೇನುತುಪ್ಪದ ಮೂಲ ಪತ್ತೆಹಚ್ಚುವಿಕೆ ಮತ್ತು ನೋಂದಣಿಗಾಗಿ ‘ಮಧುಕ್ರಾಂತಿ’ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದ್ದು, ಇದು ರಫ್ತು ಗುಣಮಟ್ಟದ ಖಾತರಿಗಾಗಿ ಪ್ರಮುಖ ಸಾಧನವಾಗಿದೆ. ಭಾರತದ ವೈವಿಧ್ಯಮಯ ಹವಾಮಾನ ಮತ್ತು ಕೃಷಿ ಪರಿಸ್ಥಿತಿಗಳು ಜೇನುಸಾಕಣೆ ಕ್ಷೇತ್ರಕ್ಕೆ ಅಪಾರ ಅವಕಾಶಗಳನ್ನು ನೀಡುತ್ತವೆ. ಗ್ರಾಮೀಣ ಅಭಿವೃದ್ಧಿ, ರೈತರ ಆದಾಯ ವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಇದರ ಪ್ರಾಮುಖ್ಯತೆಯನ್ನು ಗುರುತಿಸಿ, ಕೇಂದ್ರವು ‘ಸಿಹಿ ಕ್ರಾಂತಿ’ (Sweet Revolution) ಯ ಭಾಗವಾಗಿ NBHM ಯೋಜನೆಯನ್ನು ಜಾರಿಗೆ ತಂದಿದೆ.

ಜೇನುಸಾಕಣೆ ಗ್ರಾಮೀಣ ರೈತರು ಮತ್ತು ಭೂಹೀನ ಕಾರ್ಮಿಕರಿಗೆ ಪೂರಕ ಜೀವನೋಪಾಯವಾಗಿದ್ದು, ಇದು ಬೆಳೆಗಳ ಪರಾಗಸ್ಪರ್ಶದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ಪರಿಣಾಮವಾಗಿ ಕೃಷಿ ಇಳುವರಿ ಮತ್ತು ರೈತರ ಆದಾಯ ಎರಡೂ ಹೆಚ್ಚಾಗುತ್ತವೆ. ಜೊತೆಗೆ ಜೇನುಮೇಣ, ಪ್ರೋಪೋಲಿಸ್, ರಾಯಲ್ ಜೆಲ್ಲಿ, ಜೇನು ವಿಷ ಇತ್ಯಾದಿ ಉತ್ಪನ್ನಗಳು ಗ್ರಾಮೀಣ ಕುಟುಂಬಗಳಿಗೆ ಹೆಚ್ಚುವರಿ ಆದಾಯದ ಮೂಲವಾಗಿವೆ.

Related posts