ಮೈಸೂರು: ದಸರಾ ನಗರಿ ಮೈಸೂರಿನಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.
ಹೊಟ್ಟೆಪಾಡಿಗಾಗಿ ಬಲೂನ್ ಮಾರಾಟದ ಕೆಲಸಕ್ಕಾಗಿ ದಸರಾ ವೇಳೆ ಮೈಸೂರಿಗೆ ಬಂದಿದ್ದ ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಅರಮನೆ ಮುಂಭಾಗದ ದೊಡ್ಡ ಕೆರೆ ಮೈದಾನದ ಬಳಿ ತಂಗಿದ್ದವು. ಬುಧವಾರ ಚಾಮುಂಡೇಶ್ವರಿ ದೇವಾಲಯದ ತೆಪ್ಪೋತ್ಸವ ಮುಗಿಸಿ, ಗುರುವಾರ ಬೇರೆ ಕಡೆ ತೆರಳಲು ಸಿದ್ಧತೆಯಲ್ಲಿದ್ದರು. ಬುಧವಾರ ರಾತ್ರಿ ಹೆತ್ತವರ ಜೊತೆ ಮಲಗಿದ್ದ ಬಾಲಕಿ ಬೆಳಿಗ್ಗೆ ಕಾಣೆಯಾಗಿದ್ದು, ಹುಡುಕಾಟ ನಡೆಸಿದಾಗ ಶಿಬಿರದಿಂದ ದೂರದ ಗುಂಡಿಯಲ್ಲಿ ಶವ ಪತ್ತೆಯಾಗಿದೆ. ಶವದ ಮೇಲೆ ಸರಿಯಾಗಿ ಬಟ್ಟೆಯಿರಲಿಲ್ಲದ ಕಾರಣ ಅತ್ಯಾಚಾರ ನಡೆಸಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಆರೋಪಿಯ ಸುಳಿವನ್ನು ಪತ್ತೆಹಚ್ಚಿದರು. ಮೈಸೂರಿನ ಸಿದ್ದಲಿಂಗಪುರ ನಿವಾಸಿ ಕಾರ್ತಿಕ್ ಎಂದು ಆರೋಪಿಯನ್ನು ಗುರುತಿಸಿದ ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದರು.
ಹಿಂದೆ ಮಂಡ್ಯದಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ ಪ್ರಕರಣದಲ್ಲೂ ಸಿಕ್ಕಿಬಿದ್ದಿದ್ದ ಕಾರ್ತಿಕ್ ವಿರುದ್ಧ ಹಲವು ಆರೋಪಗಳಿದ್ದು, ಸುಮಾರು ಎರಡು ವರ್ಷ ಜೈಲಿನಲ್ಲಿದ್ದ ಆತ ಇತ್ತೀಚೆಗೆ ಬಿಡುಗಡೆಯಾಗಿದ್ದ ಎನ್ನಲಾಗಿದೆ.
ಗುರುವಾರ ಈತ ಕೊಳ್ಳೇಗಾಲದ ಕಡೆಗೆ ಪರಾರಿಯಾಗುತ್ತಿದ್ದಾಗ ಮೇಟಗಳ್ಳಿ ಬಳಿ ಅವನನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿ ಪೊಲೀಸರ ಮೇಲೆಯೇ ದಾಳಿ ನಡೆಸಿದ ಕಾರಣ, ಪೊಲೀಸರು ಗುಂಡು ಹಾರಿಸಿ ಆತನನ್ನು ವಶಕ್ಕೆ ಪಡೆಡಿದ್ದಾರೆ.
ಆರೋಪಿಗೆ ಕಾಲಿಗೆ ಗುಂಡು ತಗುಲಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.