ಬೆಂಗಳೂರು: ದೀರ್ಘ ಕಾಲದ ನಿದ್ದೆಯಿಂದ ಎದ್ದ ಮುಖ್ಯಮಂತ್ರಿಯಿಂದ ಬೋಗಸ್ ದರ್ಶನ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿಯವರ ಜನತಾದರ್ಶನ ಕಾರ್ಯವನ್ನು ಬೋಗಸ್ ದರ್ಶನ ಎಂದು ಲೇವಡಿ ಮಾಡಿದ ಅಶೋಕ್ ಅವರು, ನೆಟ್ಟಗೆ ಕೆಲಸ ಮಾಡದ ಮಂತ್ರಿಗಳನ್ನು ಕರೆಯಿಸಿ ಮೊದಲು ಅವರ ದರ್ಶನ ಮಾಡಬೇಕಿತ್ತು. ಯಾರ್ಯಾರು ಏನು ಕೆಲಸ ಮಾಡಿದ್ದಾರೆ ಎಂದು ಮಾಹಿತಿ ಪಡೆಯಬೇಕಿತ್ತು. ಅದನ್ನು ಬಿಟ್ಟು ಖುರ್ಚಿ, ಮೇಜು ಹಾಕಿಸಿ ಮನವಿ ಪತ್ರ ಪಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸಿಎಂ ಸೇರಿದಂತೆ ಎಲ್ಲ ಸಚಿವರು ಜಿಲ್ಲಾ ಕೇಂದ್ರಗಳಲ್ಲಿ ಜನತಾದರ್ಶನ ಮಾಡಿ ಪ್ರಾಮಾಣಿಕ ಪ್ರಯತ್ನ ಮಾಡಿದಿದ್ದರೆ ಸಾವಿರಾರು ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು. ಅದನ್ನು ಬಿಟ್ಟು ಸಿಎಂ ಅವರು ಸೀಮಿತ ಸಂಖ್ಯೆ ಜನರ ಅಹವಾಲು ಕೇಳಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ದಿಢೀರ್ ಎಂದು ಸಿಎಂ ಅವರು ಜನತಾದರ್ಶನ ಮಾಡುತ್ತಿದ್ದಾರೆ ಎಂದರೆ ಇವತ್ತು ದೀರ್ಘ ಕಾಲದ ನಿದ್ದೆಯಿಂದ ಎದ್ದಿದ್ದಾರೆ ಎಂದು ಅರ್ಥ. ಏಕೆಂದರೆ ಆಡಳಿತ ಸಂಪೂರ್ಣ ನೆಲಕಚ್ಚಿದ್ದು ಅಧಿಕಾರಶಾಹಿ ಜನರ ಶೋಷಣೆಯಲ್ಲಿ ನಿರತವಾಗಿದೆ. ಇದನ್ನು ಗಮನಿಸಿ ಸರಿಪಡಿಸಬೇಕಿದ್ದ ಸಚಿವರು ತೆಲಂಗಾಣ ಚುನಾವಣೆಯಲ್ಲಿ ಗ್ಯಾರೆಂಟಿ ಯೋಜನೆಗಳಿಂದ ಕರ್ನಾಟಕದಲ್ಲಿ ಕ್ರಾಂತಿ ಆಗಿದೆ ಎಂದು ಬುರುಡೆ ಭಾಷಣ ಬಿಗಿಯುತ್ತಿದ್ದಾರೆ. ಅಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಡಿದಿರುವ ಬರಗಾಲ ನಿವಾರಣೆಗಾಗಿ ಸಿದ್ದರಾಮಯ್ಯ ಎಲ್ಲಾ ಸಚಿವರನ್ನು ಅಲ್ಲಿಗೆ ನಿಯೋಜಿಸಿದ್ದಾರೆ. ಇಲ್ಲಿ ಜನ ತತ್ತರಿಸುತ್ತಿದ್ದರೂ ಕೇಳುವವರು ದಿಕ್ಕಿಲ್ಲ ಎಂದು ಕಿಡಿಕಾರಿದರು.
ಮಾಗಡಿ ಶಾಸಕ ಬಾಲಕೃಷ್ಣ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿ, ಅವರು ಈಗಾಗಲೇ ಮೂರು ಪಕ್ಷಗಳಿಗೆ ಪಕ್ಷಾಂತರ ಮಾಡಿದ್ದಾರೆ. ಹೀಗಾಗಿ ಪಕ್ಷಗಳ ಸಂಸ್ಥಾಪಕ ಅಧ್ಯಕ್ಷರು ಯಾರ್ಯಾರು ಎಂಬುದನ್ನೇ ತಿಳಿದುಕೊಂಡಿಲ್ಲ. ಕಾಂಗ್ರೆಸ್ ಸ್ಥಾಪಕ ಅಧ್ಯಕ್ಷ ಬ್ರಿಟಿಷ್ ಎಂಬುದೂ ಗೊತ್ತಿಲ್ಲ. ಅವರ ಪರಂಪರೆಯೇ ಕಾಂಗ್ರೆಸ್ ನಲ್ಲಿ ಮುಂದುವರೆಯುತ್ತಿದೆ. ಯುಪಿಎ ಅವಧಿಯಲ್ಲಿ ಕಾಶ್ಮೀರದಲ್ಲಿ ಸೈನಿಕರಿಗೆ ಕಾಸು ಕೊಟ್ಟು ಕಲ್ಲು ಹೊಡೆಸುತ್ತಿದ್ದರು. ಅವರೆಲ್ಲರೂ ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ಜನಜೀವನ ಸಹಜಸ್ಥಿತಿಗೆ ಮರಳಿದೆ. ಇದಕ್ಕೆ ಮೋದಿ ಸರಕಾರದ ಕಠಿಣ ಕ್ರಮಗಳು ಕಾರಣ ಎಂದೂ ಅಶೋಕ್ ವಿವರಿಸಿದರು.