ಬೆಂಗಳೂರು: ರಾಜಧಾನಿಯಲ್ಲಿ ನಡೆದ 7.11 ಕೋಟಿ ರೂಪಾಯಿ ಹಗಲು ದರೋಡೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಗೋವಿಂದರಾಜನಗರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತನಿಖೆಗೆ ರಚಿಸಲಾದ ವಿಶೇಷ ತಂಡಗಳು ದರೋಡೆ ಕೃತ್ಯಕ್ಕೆ ಸಂಬಂಧಿಸಿದ ಸುಳಿವುಗಳನ್ನು ಪತ್ತೆಹಚ್ಚಿ ಶಂಕಿತರನ್ನು ವಶಕ್ಕೆ ಪಡೆದಿವೆ. ನವೆಂಬರ್ 20ರ ರಾತ್ರಿ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ಕಾನ್ಸ್ಟೆಬಲ್ನ್ನು ಬೆಳ್ಳಂಬೆಳಗ್ಗೆ ವಶಕ್ಕೆ ಪಡೆಯಲಾಗಿದೆ. ಮತ್ತೊಬ್ಬ ಆರೋಪಿಯು ಕೇರಳ ಮೂಲದವನು ಎನ್ನಲಾಗಿದೆ. ಆತ ಇತ್ತೀಚೆಗೆ CMS ಇನ್ಫೋ ಸಿಸ್ಟಮ್ಸ್ ಲಿಮಿಟೆಡ್ ಸಂಸ್ಥೆಗೆ ರಾಜೀನಾಮೆ ನೀಡಿರುವ ಮಾಜಿ ಉದ್ಯೋಗಿ ಎಂಬುದು ತಿಳಿದು ಬಂದಿದೆ. ದರೋಡೆಗೆ ಗುರಿಯಾದ ವಾಹನ ಇದೇ ಕಂಪನಿಗೆ ಸೇರಿದ್ದೇ ಎಂಬ ಬಗ್ಗೆ ತನಿಖೆ ಬಿರುಸುಗೊಂಡಿದೆ.
ಮೂಲಗಳ ಪ್ರಕಾರ, ಬಂಧಿತ ಇಬ್ಬರೂ ಕಳೆದ ಆರು ತಿಂಗಳುಗಳಿಂದ ಪರಸ್ಪರ ಸಂಪರ್ಕದಲ್ಲಿದ್ದು, ದರೋಡೆ ಯೋಜನೆಯನ್ನು ಸೂಕ್ಷ್ಮವಾಗಿ ರೂಪಿಸಿದ್ದರು. ಘಟನೆಯ ಸುಮಾರು 45 ನಿಮಿಷಗಳ ನಂತರ ಮಾತ್ರ ನಿಯಂತ್ರಣ ಕೊಠಡಿಗೆ ದರೋಡೆ ಬಗ್ಗೆ ಮಾಹಿತಿ ತಲುಪಿರುವುದು ಅನುಮಾನವನ್ನು ಹುಟ್ಟುಹಾಕಿ, ‘ಇನ್ಸೈಡ್ ಜಾಬ್’ ಎಂಬ ಶಂಕೆಗೆ ಕಾರಣವಾಗಿತ್ತು.
ದರೋಡೆ ನಡೆದ ಪ್ರದೇಶದಲ್ಲಿ ಸಕ್ರಿಯವಾಗಿದ್ದ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಿದಾಗ ಕಾನ್ಸ್ಟೆಬಲ್ ಮತ್ತು ಮಾಜಿ ಉದ್ಯೋಗಿಯ ಮಧ್ಯೆ ನಡೆದ ನಿರಂತರ ಕರೆಗಳು ತನಿಖಾಧಿಕಾರಿಗಳಿಗೆ ಮಹತ್ವದ ಸುಳಿವನ್ನುಕೊಟ್ಟಿವೆ. ಇತ್ತೀಚಿನ ದಿನಗಳಲ್ಲಿಯೂ ಇಬ್ಬರು ನಿಯಮಿತ ಸಂಪರ್ಕದಲ್ಲಿದ್ದರೆನ್ನುವ ಮಾಹಿತಿ ಸಿಡಿಆರ್ ಪರಿಶೀಲನೆಗಳಿಂದ ಬಹಿರಂಗವಾಗಿದೆ.
ಘಟನೆಯ ನಂತರ ತಕ್ಷಣ ಗಡಿಗಳನ್ನು ಮುಚ್ಚಿ ವಾಹನ ತಪಾಸಣೆ ನಡೆಸಿದರೂ, ಆರೋಪಿಗಳು ನಗರವನ್ನು ತೊರೆದು ಪರಾರಿಯಾಗಿದ್ದಾರೆ. ಈ ಗ್ಯಾಂಗ್ ತಮಿಳುನಾಡು ಅಥವಾ ಆಂಧ್ರ ಪ್ರದೇಶದಲ್ಲಿ ಅಡಗಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೃತ್ಯಕ್ಕೆ ಬಳಸಿದ ವಾಹನವನ್ನು ಆಂಧ್ರದ ಚಿತ್ತೂರು ಜಿಲ್ಲೆಯ ತಿರುಪತಿ ಸಮೀಪ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಈ ಕುರಿತು ಪೊಲೀಸ್ ಇಲಾಖೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ದರೋಡೆಕೋರರ ಕುರಿತು ಪೊಲೀಸರು ಪ್ರಮುಖ ಸುಳಿವುಗಳನ್ನು ಪತ್ತೆ ಮಾಡಿದ್ದು, ಎಲ್ಲಾ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಗೃಹ ಸಚಿವ ಜಿ. ಪರಮೇಶ್ವರ ಅವರೂ ಇದೇ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಪ್ರಕರಣ ಭೇದಿಸಲು ಎಂಟು ವಿಶೇಷ ತಂಡಗಳು ಹಾಗೂ ಸುಮಾರು 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ತೊಡಗಿಸಿಕೊಂಡಿದ್ದಾರೆ.
ಬುಧವಾರ ಹಗಲು ಹೊತ್ತಿನಲ್ಲೇ CMS ಇನ್ಫೋ ಸಿಸ್ಟಂಸ್ ಸಂಸ್ಥೆಯ ಎಟಿಎಂ ರೀಫಿಲ್ ವಾಹನವನ್ನು ಗುರಿಯಾಗಿಸಿಕೊಂಡು 7.11 ಕೋಟಿ ರೂ. ದೋಚಲಾಗಿತ್ತು. ಗ್ಯಾಂಗ್ ಸದಸ್ಯರಲ್ಲಿ ಕೆಲವರು ನಗರದ ಕಲ್ಯಾಣ್ ನಗರ ಭಾಗದವರೆಂಬ ಮಾಹಿತಿ ತನಿಖಾಧಿಕಾರಿಗಳಿಗೆ ದೊರೆತಿದೆ ಎನ್ನಲಾಗಿದೆ.
