ಲಾಕ್ ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಪೊಲೀಸರೂ ಕಾರ್ಯ ಸನ್ನದ್ಧರಾಗಿದ್ದಾರೆ. ನಿಯಮ ಉಲ್ಲಂಘಿಸುವವರಿಗೆ ಕಾನೂನು ಪ್ರಹಾರ ಮಾಡಲು ಪೊಲೀಸ್ ಕಮೀಷನರ್ ಸೂಚಿಸಿದ್ದಾರೆ.
ಬೆಂಗಳೂರು: ಕೊರೋನಾ ಸೋಂಕು ಇನ್ನೂ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತಷ್ಟು ದಿನ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಗಿದೆ. ಲಾಕ್’ಡೌನ್ ವಿಸ್ತರಣೆ ಹಿನ್ನೆಲೆಯಲ್ಲಿ ಪೊಲೀಸರು ಕೂಡಾ ಕಟ್ಟೆಚ್ಚರ ವಹಿಸಿದ್ದಾರೆ. ಇದೆ ಸಂದರ್ಭದಲ್ಲಿ ಪೊಲೀಸರು ಯಾವ ರೀತಿ ಕೆಲಸ ಮಾಡಬೇಕು? ಮಾಧ್ಯಮದವರ ಜೊತೆ, ಸಾರ್ವಜನಿಕರೊಂದಿಗೆ ಹೇಗೆ ವರಿಸಬೇಕು ಎಂಬ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾರ್ಗದರ್ಶನ ಮಾಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಹಲವೆಡೆ ಪೊಲೀಸ್ ಸಿಬ್ಬಂದಿ ಅತಿರೇಕದ ವರ್ತನೆ ತೋರಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ. ಹಾಗಾಗಿ ಕೆಲವು ಸೂತ್ರಗಳನ್ನು ಕಮೀಷನರ್ ಭಾಸ್ಕರ್ ರಾವ್ ತನ್ನ ಇಲಾಖೆಯ ಸಿಬ್ಬಂದಿಗೆ ಸಿದ್ದಪಡಿಸಿದ್ದಾರೆ. ಅದರಂತೆ ಕಟ್ಟುನಿಟ್ಟಿನ ಕ್ರಮ ಅನುಸರಿಸಬೇಕೆಂದು ಅವರು ಸೂಚಿಸಿದ್ದಾರೆ.
- ಎಲ್ಲಾ ಸಿಬ್ಬಂದಿ ಒಳ್ಳೆಯ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ಯಾವುದೇ ರೀತಿ ತೊಂದರೆಯಾಗಬಾರದು.
- ಮಾಧ್ಯಮದವರಿಗೆ, ಹಣ್ಣು ತರಕಾರಿ ಮಾರುವವರಿಗೆ, ಪೌಲ್ಟ್ರಿ ಕೆಲಸದವರಿಗೆ, ದಿನಸಿ ವ್ಯಾಪಾರಿಗಳಿಗೆ ಸಮಸ್ಯೆ ಮಾಡಬಾರದು.
- ಎಪಿಎಂಸಿ ಗಳಿಗೆ ದೊಡ್ಡ ದೊಡ್ಡ ಲಾರಿಗಳು ಬರುತ್ತವೆ. ಆ ಗೂಡ್ಸ್ ವಾಹನಗಳಿಗೆ ಯಾವುದೇ ತೊಂದರೆ ಆಗಬಾರದು. ಖಾಲಿ ವಾಹನಗಳೇ ಇರಲಿ ಚೆಕ್ ಪೋಸ್ಟ್’ಗಳಲ್ಲಿ ಯಾರಿಗೂ ಸಮಸ್ಯೆ ಮಾಡಬಾರದು.
- ಎಪಿಎಂಸಿ ಗಳಿಗೆ ತೆರಳುವ ಹಮಾಲಿಗಳಿಗೆ ತೊಂದರೆ ಕೊಡಬಾರದು.
ಡಯಾಲಿಸಿಸ್, ಕಿಮೊತರಪಿ ಸಹಿತ ಅಗತ್ಯ ಚಿಕಿತ್ಸೆಗಾಗಿ ತೆರಳುವವರಿಗೆ ಪಾಸ್ ಇಲ್ಲದಿದ್ದರೂ ಯಾವುದೇ ರೀತಿ ತೊಂದರೆಯಾಗಬಾರದು. ಗರ್ಭಿಣಿಯರು, ಅನಾರೋಗ್ಯಕ್ಕೆ ಒಳಗಾದವರು ಬಂದಾಗ ಅವರಿಗೆ ಸಹಾಯ ಮಾಡಿ. - ಎಟಿಎಂ ಕೆಲಸದವರಿಗೆ, ಒಳಚರಂಡಿ ಕೆಲಸದವರಿಗೆ, ಸರ್ಕಾರಿ ಅಧಿಕಾರಿಗಳು, ಎಲೆಕ್ಟ್ರಿಸಿಟಿ, ವಾಟರ್ ಸಪ್ಲೈ, ಪ್ರವೈಟ್ ಸೆಕ್ಯೂರಿಟಿ ಸಹಿತ ಎಸೆನ್ಸಿಯಲ್ ಸರ್ವಿಸ್’ಗೆ ತೊಂದರೆ ಕೊಡಬಾರದು.
- ನಕಲಿ ಪಾಸ್ ಇಟ್ಟುಕೊಂಡು ಓಡಾಡುವರ ವಿರುದ್ದ ಕೇಸ್ ದಾಖಲಿಸಿ ಸೂಕ್ತ ಕ್ರಮ ಜರುಗಿಸಿ. ವಾಹನಗಳನ್ನು ಜಪ್ತಿ ಮಾಡಿದಲ್ಲಿ ಲಾಕ್ ಡೌನ್ ಮುಗಿದ ಬಳಿಕ ಅವುಗಳನ್ನು ಹಿಂತಿರುಗಿಸಲು ಅನುಕೂಲವಾಗುವಂತೆ ದಾಖಲಾತಿಗಳನ್ನು ಮಾಡಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ದುರ್ವರ್ತನೆ ತೋರಬಾರದು. ಜೊತೆಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳಿ.
ಪೊಲೀಸ್ ಕಮೀಷನರ್ ನೀಡಿರುವ ಈ ಸೂಚನೆಗಳು ಪರಿಸ್ಥಿತಿ ನಿಭಾಯಿಸಲು ಜನಸ್ನೇಹಿ ಸೂತ್ರವಾಗಿವೆ. ಇದೆ ವೇಳೆ ಪೊಲೀಸ್ ಕೆಲಸಕ್ಕೆ ಅಡ್ಡಿಪಡಿಸಿದಲ್ಲಿ, ಅನಗತ್ಯವಾಗಿ ಓಡಾಡಿದಲ್ಲಿ ಯಾರೇ ಆಗಲಿ ಅಂಥವರಿಗೆ ಕಾನೂನು ಪ್ರಹಾರ ಖಚಿತ ಎಂದು ಅಧಿಕಾರಿಗಳು ತಿಳಿಸಿದ್ದಾರೆ.