ಬಿಜೆಪಿ ನಾಯಕರ ಬಗ್ಗೆ ಸಿಟ್ಟಾಗಿರುವ ರಾಮುಲು ಬಗ್ಗೆ ಕಾಂಗ್ರೆಸ್’ಗೆ ಸಾಫ್ಟ್ ಕಾರ್ನರ್

ಬೆಂಗಳೂರು: ಬಿಜೆಪಿ ನಾಯಕರ ಒಳಜಗಳದಿಂದ ಬೇಸತ್ತಿರುವ ಮಾಜಿ ಸಚಿವ ಶ್ರೀರಾಮುಲು ಬಗ್ಗೆ ಕಾಂಗ್ರೆಸ್ ಅನುಕಂಪ ವ್ಯಕ್ತಪಡಿಸಿದೆ. ಹಿಂದುಳಿದ ವರ್ಗದ ನಾಯಕ ಶ್ರೀರಾಮುಲು ಅವರನ್ನು ರಾಜಕೀಯವಾಗಿ ಮುಗಿಸುವ ಯತ್ನ ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದ ತನ್ನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಬಣ ಜಗಳದಿಂದ ಒಡೆದ ಮನೆಯಾಗಿರುವ ರಾಜ್ಯ ಬಿಜೆಪಿಯಲ್ಲಿ ಒಳಗೆ ಕುದಿಯುತ್ತಿರುವ ಅಸಮಧಾನದ ಒಳ ಬೇಗುದಿಯೂ ಸ್ಪೋಟಗೊಳ್ಳುವ ಅಂತಿಮ ಹಂತ ತಲುಪಿದೆ ಎಂದು ವಿಶ್ಲೇಷಿಸಿದೆ.

ಮಾಜಿ ಸಚಿವರಾದ ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಅವರನ್ನ ತನ್ನ ಅಧಿಕಾರ ದಾಹಕ್ಕೆ ಬಳಸಿಕೊಂಡ ಬಿಜೆಪಿ ಈಗ ಉಂಡೆಲೆಯಂತೆ ಕಾಣುತ್ತಿದೆ. ದಲಿತ – ಹಿಂದುಳಿದ ವರ್ಗಗಳ ನಾಯಕರನ್ನು ಎಂದೂ ಬೆಳೆಯಲು ಬಿಡದ ಬಿಜೆಪಿ ಪಕ್ಷ ‘ಆಪ್ತ ಮಿತ್ರ’ರ ನಡುವೆ ತಂದಿಟ್ಟು ತಮಾಷೆ ನೋಡುತ್ತಿದೆ ಎಂದು ಕಾಂಗ್ರೆಸ್ ಗೇಲಿ ಮಾಡಿದೆ.

ಇದು ಹಿಂದುಳಿದ ವರ್ಗದ ನಾಯಕ ಶ್ರೀರಾಮುಲು ಅವರನ್ನು ರಾಜಕೀಯವಾಗಿ ಮುಗಿಸುವ, ಜನಾರ್ಧನ ರೆಡ್ಡಿ ಅವರ ಬಲ ತಗ್ಗಿಸುವ, ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಸ್ವಪಕ್ಷೀಯ ತಂತ್ರ ಎಂದು ತಿಳಿಯದೆ ಮನೋರಂಜನೆಯ ಸರಕಾಗಿದ್ದಾರೆ ಬಳ್ಳಾರಿ ಗೆಳೆಯರು ಎಂದು ಕಾಂಗ್ರೆಸ್ ಟೀಕಿಸಿದೆ.

Related posts