ಬಿಹಾರ ಅಖಾಡಕ್ಕೆ ಕರ್ನಾಟಕದ ಹಣ; ಬಿಜೆಪಿ ಆರೋಪ

ಬೆಂಗಳೂರು: ಬಿಹಾರ ಚುನಾವಣೆಗಾಗಿ ಹೈಕಮಾಂಡ್ ಗೆ 300 ಕೋಟಿ ರೂಪಾಯಿ ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರ ಕರ್ಮಕಾಂಡ ನೋಡುತ್ತಿದ್ದರೆ ಇನ್ನು ಸಿಎಂ, ಡಿಸಿಎಂ, ಮಂತ್ರಿಗಳು ತಮ್ಮ ಇರುವ ಕುರ್ಚಿ ಉಳಿಸಿಕೊಳ್ಳಲು ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡ ನೀವೇ ಊಹಿಸಿಕೊಳ್ಳಿ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಒಂದು ಕಡೆ ಜನರಿಗೆ ಕ್ಯಾಸಿನೋ, ಜೂಜು, ಬೆಟ್ಟಿಂಗ್ ಆಡಿಸಿ ಬಡವರ ಮನೆಹಾಳು ಮಾಡಿ ಅಡ್ಡದಾರಿಯಲ್ಲಿ ದುಡ್ಡು ಮಾಡುವುದು. ಆ ಪಾಪದ ಹಣದಲ್ಲಿ ಟಿಕೆಟ್ ಪಡೆದು, ಚುನಾವಣೆ ಎದುರಿಸಿ, ಹೈಕಮಾಂಡ್ ಗೆ ಕಪ್ಪ ಕೊಟ್ಟು ಮಂತ್ರಿಗಿರಿ ಗಿಟ್ಟಿಸಿಕೊಳ್ಳುವುದು. ಆಮೇಲೆ ಮಂತ್ರಿಗಿರಿ ಬಳಸಿಕೊಂಡು ಇನ್ನಷ್ಟು ಲೂಟಿ ಮಾಡುವುದು. ಇದು ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಹೆಣೆದಿರುವ ವಿಷ ವರ್ತುಲ ಎಂದವರು ಟ್ವೀಟ್ ಮಾಡಿದ್ದಾರೆ.

ತೆಲಂಗಾಣ ಚುನಾವಣೆಗೆ, ಲೋಕಸಭೆ ಚುವಾವಣೆಗೆ ವಾಲ್ಮೀಕಿ ನಿಗಮದ ಹಣ ಸೇರಿದಂತೆ ಸಾವಿರಾರು ಕೋಟಿ ಲಪಟಾಯಿಸಿದ್ದಾಯ್ತು. ಈಗ ಬಿಹಾರ ಚುನಾವಣೆಗೆ ಕನ್ನಡಿಗರ ತೆರಿಗೆ ಹಣ ಇನ್ನೆಷ್ಟು ಲೂಟಿ ಆಗುತ್ತದೆಯೋ ಗೊತ್ತಿಲ್ಲ ಎಂದಿರುವ ಅಶೋಕ್, ಈ ರೀತಿ ಪಾಪದ ಹಣದಲ್ಲಿ ಚುನಾವಣೆ ನಡೆಸುವ ರಾಹುಲ್ ಗಾಂಧಿ ಅವರಿಗೆ ಚುನಾವಣಾ ಪ್ರಕ್ರಿಯೆ ಬಗ್ಗೆ, ಚುನಾವಣಾ ಆಯೋಗದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

ನಾಚಿಕೆಯಾಗಬೇಕು ಕಾಂಗ್ರೆಸ್ ಪಕ್ಷಕ್ಕೆ. ಅಂದಹಾಗೆ ಸಿಎಂ ಹಾಗೂ ಡಿಸಿಎಂ ಅವರು ಬಿಹಾರ ಚುನಾವಣೆಗೆ ಎಷ್ಟು ಕೋಟಿ ಹಣ ಲೂಟಿ ಮಾಡಿ ರಾಹುಲ್ ಗಾಂಧಿ ಅವರಿಗೆ ಚಂದಾ ನೀಡುವ ಭರವಸೆ ಕೊಟ್ಟಿದ್ದಾರೆ ಎಂದೂ ತರಾಟೆಗೆ ತೆಗೆದುಕೊಂಡಿದ್ದಾರೆ.

Related posts