ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತ ನವೆಂಬರ್ 11ರಂದು ನಡೆಯಲಿದ್ದು, ಅದರ ಹಿನ್ನೆಲೆ ಕಾಂಗ್ರೆಸ್ ಭಾನುವಾರ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಪಕ್ಷದ ಶ್ರೇಷ್ಟ ನಾಯಕತ್ವದ ಜೊತೆಗೆ ರಾಜ್ಯದ ಪ್ರಮುಖ ಮುಖಂಡರೂ ಸೇರಿದ್ದಾರೆ. ಇದರಿಂದ ಬಿಹಾರದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಲು ಕಾಂಗ್ರೆಸ್ ಸಂಪೂರ್ಣ ಶಕ್ತಿಯಿಂದ ಕಣಕ್ಕಿಳಿದಿದೆ ಎಂಬ ಸಂದೇಶ ಸಿಕ್ಕಿದೆ. ಪಟ್ಟಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಳಿಕ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಇದ್ದಾರೆ. ಇವರು ಪ್ರಮುಖ ಕ್ಷೇತ್ರಗಳಲ್ಲಿ ಬೃಹತ್ ರ್ಯಾಲಿಗಳು ಹಾಗೂ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್, ದಿಗ್ವಿಜಯ ಸಿಂಗ್, ಅಧೀರ್ ರಂಜನ್ ಚೌಧರಿ, ಸಚಿನ್ ಪೈಲಟ್ ಮೊದಲಾದ ಹಿರಿಯ ನಾಯಕರು ವಿವಿಧ ಪ್ರದೇಶಗಳಲ್ಲಿ ಪ್ರಚಾರ ಅಭಿಯಾನ ಮುನ್ನಡೆಸಲಿದ್ದಾರೆ.
ಕೆ.ಸಿ. ವೇಣುಗೋಪಾಲ್, ಪವನ್ ಖೇರಾ, ರಣದೀಪ್ ಸಿಂಗ್ ಸುರ್ಜೇವಾಲಾ, ಇಮ್ರಾನ್ ಪ್ರತಾಪ್ಗಢಿ, ಸುಖ್ವಿಂದರ್ ಸಿಂಗ್ ಸುಖು, ತಾರಿಕ್ ಅನ್ವರ್, ಮೀರಾ ಕುಮಾರ್, ಗೌರವ್ ಗೊಗೊಯ್, ರಂಜೀತ್ ರಂಜನ್, ಜಿಗ್ನೇಶ್ ಮೇವಾನಿ, ಸೈಯದ್ ನಸೀರ್ ಹುಸೇನ್, ರಾಜೇಶ್ ರಂಜನ್ (ಪಪ್ಪು ಯಾದವ್), ರಾಜೇಂದ್ರ ಪಾಲ್ ಗೌತಮ್ ಮೊದಲಾದವರು ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಬಿಹಾರದ ಸ್ಥಳೀಯ ನಾಯಕರು ಮದನ್ ಮೋಹನ್ ಝಾ, ಶಕೀಲ್ ಅಹ್ಮದ್ ಖಾನ್, ಸುಖ್ದೇವ್ ಭಗತ್, ರಾಜೇಶ್ ಕುಮಾರ್ ರಾಮ್, ಅಖಿಲೇಶ್ ಪ್ರಸಾದ್ ಸಿಂಗ್ ಮತ್ತು ಫರ್ಕಾನ್ ಅನ್ಸಾರಿ ಸೇರಿದ್ದಾರೆ. ಯುವ ಮತದಾರರನ್ನು ಸೆಳೆಯಲು ಕನ್ಹಯ್ಯ ಕುಮಾರ್, ಸುಪ್ರಿಯಾ ಶ್ರೀನಾಟೆ, ಪ್ರಮೋದ್ ತಿವಾರಿ, ಕೃಷ್ಣ ಅಲ್ಲಾವರು, ಅಜಯ್ ರೈ ಮತ್ತು ಅನಿಲ್ ಜೈಹಿಂದ್ ಮೊದಲಾದ ಯುವ ಮುಖಂಡರನ್ನೂ ಸೇರಿಸಲಾಗಿದೆ.
ಉದ್ಯೋಗ, ಹಣದುಬ್ಬರ, ರೈತರ ಸಮಸ್ಯೆ, ಮಹಿಳಾ ಕಲ್ಯಾಣ ಮುಂತಾದ ವಿಷಯಗಳ ಜೊತೆಗೆ ಎನ್ಡಿಎ ಆಡಳಿತದ ವೈಫಲ್ಯಗಳ ವಿರುದ್ಧ ಪ್ರಚಾರ ಕೇಂದ್ರೀಕರಿಸುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತಕ್ಕೆ ನವೆಂಬರ್ 6ರಂದು ಮತದಾನ ನಡೆಯಲಿದ್ದು, ಎರಡನೇ ಹಂತಕ್ಕೆ ನವೆಂಬರ್ 11ರಂದು. ಮತ ಎಣಿಕೆ ನವೆಂಬರ್ 14ರಂದು ನಡೆಯಲಿದೆ.
