ಮಂಡ್ಯ: ಹಿಂದೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ತಿಯಾಗಿ ಸ್ಪರ್ಧಿಸಿದ್ದ ನಿಖಿಲ್ ಕುಮಾರಸ್ವಾಮಿ ಸೋತಿದ್ದೇಕೆ ಎಂಬ ಬಗ್ಗೆ ಈಗಿನ್ನೂ ಚರ್ಚೆ ಸಾಗಿದೆ. ಕಾಂಗ್ರೆಸ್ ನಾಯಕರ ಪಿತೂರಿಯಿಂದಲೇ ನಿಖಿಲ್ ಸೋತಿದ್ದಾರೆ ಎಂದು ಜೆಡಿಎಸ್ ನಾಯಕರು ಆರೋಪಿಸುತ್ತಿದ್ದಾರೆ. ನಿಖಿಲ್ ತಂದೆ ಕುಮಾರಸ್ವಾಮಿಯವರೂ ಅದೇ ರೀತಿಯ ವ್ಯಾಖ್ಯಾನವನ್ನು ನೀಡಿ ಕಾಂಗ್ರೆಸ್ ನಾಯಕರ ಉಬ್ಬೇರಿಸುವಂತೆ ಮಾಡಿದ್ದಾರೆ. ಕುಮಾರಸ್ವಾಮಿ ಮಾಡಿರುವ ಆರೋಪಗಳಿಗೆ ತಮ್ಮದೇ ದಾಟಿಯಲ್ಲಿ ಉತ್ತರ ನೀಡಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಮನಗರದಲ್ಲಿ ಕುಮಾರಸ್ವಾಮಿ ಅವರೂ ಶಾಸಕರಾಗಿದ್ದರು, ಮುಖ್ಯಮಂತ್ರಿಯೂ ಆದರು. ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರು ಕೂಡ ಶಾಸಕರಾಗಿದ್ದರು. ಆದರೂ ನಿಖಿಲ್ ರಾಮನಗರದಲ್ಲಿ ಯಾಕೆ ಸೋತರು? ಅವರು ಕೆಲಸ ಮಾಡಿದ್ದರೆ ಜನ ಸೋಲಿಸುತ್ತಿದ್ದರಾ? ಕೆಲಸ ಮಾಡಿ, ಜನರ ಸೇವೆ ಮಾಡಿದ್ದರೆ ಸೋಲುತ್ತಿರಲಿಲ್ಲ. 5 ವರ್ಷಕ್ಕೊಮ್ಮೆ ಬಂದು ಮತ ನೀಡಿ ಎಂದರೆ ಹೇಗೆ? ಮತದಾರರು ಏನು ಕೂಲಿಕಾರ್ಮಿಕರೇ? ಮತದಾನದ ಹಕ್ಕು ಸ್ವಾಭಿಮಾನದ ಪ್ರತೀಕ. ಅದನ್ನು ಯಾರೂ ಮಾರಿಕೊಳ್ಳುವುದಿಲ್ಲ ಎಂದರು.
ಕೊಟ್ಟ ಕುದುರೆ ಏರಲು ಅರಿಯದೆ ಮತ್ತೊಂದು ಕುದುರೆ ಏರಲು ಬಯಸುವವನು ವೀರನೂ ಅಲ್ಲ, ಶೂರನೂ ಅಲ್ಲ ಎಂದು ಅಲ್ಲಮಪ್ರಭುಗಳು ಹೇಳಿದ್ದಾರೆ. ಅಧಿಕಾರ ಇದ್ದಾಗ ಈ ಕ್ಷೇತ್ರದ ಹಳ್ಳಿಗಳಿಗೆ ಹೋಗಿ ಬಡವರಿಗೆ ಸಹಾಯ ಮಾಡದಿದ್ದರೆ, ಜನರಿಗೆ ನೆರವಾಗದಿದ್ದರೆ, ಶಾಸಕನಾಗಿ ಒಂದೇ ಒಂದು ಬಗರ್ ಹುಕ್ಕುಂ ಸಭೆ ಮಾಡಲಿಲ್ಲ. ಈ ಕ್ಷೇತ್ರದಲ್ಲಿ ಒಮ್ಮೆಯೂ ರಾಷ್ಟ್ರಧ್ವಜ, ಕನ್ನಡ ಧ್ವಜ ಹಾರಿಸಲಿಲ್ಲ. ಈ ದೇಶಕ್ಕೆ ಗೌರವ ಕೊಡದಿದ್ದರೆ, ಜನರಿಗೆ ಗೌರವ ಕೊಡುತ್ತಾರಾ? ಕುಮಾರಸ್ವಾಮಿಗೆ ಅವರಾಯ್ತು, ಅವರ ಕುಟುಂಬವಾಯ್ತು ಎಂದು ಡಿಕೆಶಿ ಟೀಕಿಸಿದರು.
ಇಡೀ ಸರ್ಕಾರ ಯೋಗೇಶ್ವರ್ ಹಾಗೂ ನಿಮ್ಮ ಜತೆಗಿದೆ. ಈ ಅವಕಾಶವನ್ನು ನೀವು ಬಿಡುತ್ತೀರಾ? ಜೆಡಿಎಸ್ ನವರು ಅತ್ತರೆ ಅಳಲಿ, ಕುಣಿದರೆ ಕುಣಿಯಲಿ, ಏನಾದರೂ ಮಾಡಿಕೊಳ್ಳಲಿ. ನಿಮ್ಮ ಕಷ್ಟ ಸುಖಕ್ಕೆ ಆಗುವವರು ನಾವು, ನಿಮ್ಮ ಋಣ ತೀರಿಸುವವರು ನಾವು. ನಾವು ನಿಮ್ಮನ್ನು ಹಾಗೂ ಈ ಜಿಲ್ಲೆ ಬಿಟ್ಟು ಹೋಗುವುದಿಲ್ಲ. ನಿಮ್ಮ ಸೇವೆ ಮಾಡುತ್ತೇವೆ. ಹೀಗಾಗಿ ನೀವು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ, ಆಶೀರ್ವಾದ ಮಾಡಿ. ನಿಮ್ಮ ಜತೆಗೆ ನಾವು ನಿಂತು ನಿಮ್ಮ ಸೇವೆ ಮಾಡುತ್ತೇವೆ ಎಂದು ಭರವಸೆ ನೀಡಿದ ಡಿಕೆಶಿ, ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈಗೆ ಅಧಿಕಾರ ಸಿಕ್ಕ ಕಾರಣಕ್ಕೆ ನಾವು ಗ್ಯಾರಂಟಿ ಯೋಜನೆ ನೀಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ನಿಮ್ಮ ಕೈಗಳು ಬಲಿಷ್ಠವಾದವು ಎಂದರು.